

ಹೈದರಾಬಾದ್: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಹೊಸ ಚರ್ಚೆಗೆ ನಾಂದಿ ಹಾಡಿವೆ. ಇದರಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು 18ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಲಿದ್ದಾರಾ ಅಥವಾ ನಿವೃತ್ತಿ ಹೊಂದಲಿದ್ದಾರಾ ಎಂಬುದರ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.
ಏಕೆಂದರೆ 17 ಆವೃತ್ತಿ ಆರಂಭವಾಗುವುದಕ್ಕೂ ಮುನ್ನ ಧೋನಿ ನಾಯಕನ ಸ್ಥಾನದಿಂದ ಕೆಳಗಿಳಿಯುವ ಮೂಲಕ ನಿವೃತ್ತಿಯಾಗುವ ಸುದ್ದಿಗೆ ಇಂಬು ನೀಡಿದ್ದರು. ಇದಾದ ಬಳಿಕ ಆರ್ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋತ ಬಳಿಕ ಧೋನಿ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗಿತ್ತಾದರು ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಈ ಬಗ್ಗೆ ಮಾತನಾಡಿರುವ ಧೋನಿ ನಿವೃತ್ತಿಯ ನಿರ್ಧಾರವು ತನ್ನ ಕೈಯಲ್ಲಿಲ್ಲ ಎಂದು ಹೇಳುವ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ.
ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಧೋನಿಗೆ ನೀವು ಮುಂದಿನ ಐಪಿಎಲ್ ಆಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಕೂಲ್ ಆಗಿ ಉತ್ತರಿಸಿದ ಧೋನಿ ಐಪಿಎಲ್ನಲ್ಲಿ ಆಡುವುದು ನನ್ನ ಕೈಯಲ್ಲಿಲ್ಲ. ಐಪಿಎಲ್ 2025ರ ನಿಯಮಗಳನ್ನು ನೋಡಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಹೀಗಾಗಿ ಪ್ರಸ್ತುತ ಈ ನಿರ್ಧಾರವು ನನ್ನ ಕೈಯಲ್ಲಿಲ್ಲ. ತಂಡ ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕಾಗಿ ನಾವು ಕಾಯಬೇಕಾಗಿದೆ. ಚೆಂಡು ಸದ್ಯಕ್ಕೆ ನಮ್ಮ ಅಂಗಳದಲ್ಲಿಲ್ಲ. ನಿಯಮಗಳು ಮತ್ತು ನಿಬಂಧನೆಗಳನ್ನು ನೋಡಿದ ನಂತರ ನಾನು ತಂಡದ ಹಿತಾಸಕ್ತಿ ಪರಿಗಣಿಸಿ ನಿವೃತ್ತಿಯ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
2025ರಲ್ಲಿ ಐಪಿಎಲ್ ಶುರುವಾಗುವುದಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಎಷ್ಟು ಆಟಗಾರರನ್ನು ಫ್ರಾಂಚೈಸಿ ಉಳಿಸಿಕೊಳ್ಳಬೇಕೆಂಬುದರ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್ ಮ್ಯಾನೇಜ್ಮೆಂಟ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಕ್ರಿಕ್ಬಜ್ ವರದಿ ಮಾಡಿರುವ ಪ್ರಕಾರ ಬಿಸಿಸಿಐ ಫ್ರಾಂಚೈಸಿಯಲ್ಲಿ 5-6 ಆಟಗಾರರನ್ನು ರಿಟೇನ್ ಮಾಡುವ ಅವಕಾಶ ಏನಾದರೂ ನೀಡದ್ದಲ್ಲಿ ಧೋನಿ ಸಿಎಸ್ಕೆಯಲ್ಲೇ ಮುಂದುವರೆಯಲಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಸಿಎಸ್ಕೆ ಫಾಂಚೈಸಿಯು ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶಿವಂ ದುಬೆ ಹಾಗೂ ವಿದೇಶಿ ಆಟಗಾರರ ಕೋಟಾದಲ್ಲಿ ಶ್ರೀಲಂಕಾದ ಮಥೀಶ ಪಥಿರಾಣಾರನ್ನು ಉಳಿಸಿಕೊಳ್ಳಲು ಮುಂದಾಗಿದೆ.