

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಭಾರತ ತಂಡಕ್ಕೆ ಹೊಸ ಕಿಟ್ ಪ್ರಾಯೋಜಕತ್ವ ಲಭಿಸಿದೆ. ಫ್ಯಾಂಟಸಿ ಗೇಮಿಂಗ್ ಸಂಸ್ಥೆ ‘ಮೊಬೈಲ್ ಪ್ರೀಮಿಯರ್ ಲೀಗ್’ನ (ಎಂಪಿಎಲ್) ಅಂಗಸಂಸ್ಥೆಯಾಗಿರುವ ಎಂಪಿಎಲ್ ಕ್ರೀಡಾ ಉಡುಪು ಮತ್ತು ಸಾಮಗ್ರಿಗಳ ಸಂಸ್ಥೆಯು ಮುಂದಿನ 3 ವರ್ಷಗಳ ಅವಧಿಗೆ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ. ನೈಕಿ ಕಂಪನಿಯಿಂದ ತೆರವಾದ ಸ್ಥಾನವನ್ನು ಎಂಪಿಎಲ್ ತುಂಬಲಿದೆ.
ಎಂಪಿಎಲ್ ಜತೆಗೆ ಬಿಸಿಸಿಐ ಮಾಡಿಕೊಂಡಿರುವ ಒಪ್ಪಂದದ ಮೊತ್ತ ಈ ಹಿಂದೆ ನೈಕಿ ಜತೆಗೆ ಇದ್ದ ಒಪ್ಪಂದದ ಮೊತ್ತಕ್ಕಿಂತ ಸ್ವಲ್ಪಮಟ್ಟಿಗೆ ಕಡಿಮೆ ಆಗಿದೆ. ಎಂಪಿಎಲ್ ಜತೆಗಿನ ಒಪ್ಪಂದದ ಅನ್ವಯ ಬಿಸಿಸಿಐ, ಪ್ರತಿ ಪಂದ್ಯಕ್ಕೆ 65 ಲಕ್ಷ ರೂ. ಪಡೆಯಲಿದೆ. ನೈಕಿ ಜತೆಗಿನ ಈ ಹಿಂದಿನ ಒಪ್ಪಂದ ಅನ್ವಯ ಬಿಸಿಸಿಐ ಪ್ರತಿ ಪಂದ್ಯಕ್ಕೆ 88 ಲಕ್ಷ ರೂ. ಪಡೆಯುತ್ತಿತ್ತು. ಆದರೆ, ಎಂಪಿಎಲ್‌ನ ಸರಕು ಮಾರಾಟದಿಂದ ಬಿಸಿಸಿಐ ಶೇ. 10ರಷ್ಟು ರಾಯಧನವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ. 2023ರ ನವೆಂಬರ್‌ವರೆಗೆ ಈ ಒಪ್ಪಂದದ ಅವಧಿ ಇರಲಿದೆ.
ಈ ಮುನ್ನ ನೈಕಿ ಜತೆಗಿನ 5 ವರ್ಷಗಳ ಒಪ್ಪಂದ ಮುಕ್ತಾಯಗೊಂಡ ಬೆನ್ನಲ್ಲೇ ಬಿಸಿಸಿಐ ಕಿಟ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ್ದರೂ, ಯಾವ ಕಂಪನಿಯೂ ಮುಂದೆ ಬಂದಿರಲಿಲ್ಲ. ಕರೊನಾ ಹಾವಳಿಯಿಂದ ಎದುರಾದ ಆರ್ಥಿಕ ಮುಗ್ಗಟ್ಟಿನಿಂದಾಗಿ ನೈಕಿ ಕಂಪನಿಯೂ ಒಪ್ಪಂದವನ್ನು ಮುಂದುವರಿಸಲು ಒಪ್ಪಿರಲಿಲ್ಲ. ನೈಕಿ 2016ರಿಂದ 2020ರವರೆಗಿನ ಒಪ್ಪಂದದ ಅನ್ವಯ ಬಿಸಿಸಿಐಗೆ ಒಟ್ಟು 370 ಕೋಟಿ ರೂ. ಪಾವತಿಸಿತ್ತು. ಜತೆಗೆ 30 ಕೋಟಿ ರೂ. ರಾಯಧನ ನೀಡಿತ್ತು.
ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಯಾವ ಕ್ರೀಡಾ ಉಡುಪುಗಳ ಕಂಪನಿಯೂ, ಈ ಹಿಂದೆ ನೈಕಿ ನೀಡುತ್ತಿದ್ದ ಮೊತ್ತವನ್ನು ನೀಡಲು ಮುಂದೆ ಬರಲಿಲ್ಲ. ಬ್ರ್ಯಾಂಡೆಡ್ ಕಂಪನಿಗಳ ಸರಕುಗಳು ಸಾಮಾನ್ಯ ಜನರಿಗೆ ದುಬಾರಿ ಎನಿಸುತ್ತಿದ್ದ ಕಾರಣ ಮಾರಾಟವೂ ಕುಸಿದಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಹಿಂದಿನ ಮೊತ್ತಕ್ಕಿಂತ ಕಡಿಮೆ ಮೊತ್ತದ ಒಪ್ಪಂದಕ್ಕೆ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಎಂಪಿಎಲ್ ಕಂಪನಿ ಈಗಾಗಲೆ ಐಪಿಎಲ್‌ನಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ. ಜತೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನಿಬಾಗೋ ನೈಟ್‌ರೈಡರ್ಸ್ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದ್ದರೆ, ಐರ್ಲೆಂಡ್ ಮತ್ತು ಯುಎಇ ಕ್ರಿಕೆಟ್ ಸಂಸ್ಥೆಗಳ ಜತೆಗೂ ಒಪ್ಪಂದವನ್ನು ಹೊಂದಿದೆ.