ಮೋಟಾರ್ ಸೈಕಲ್ ರೇಸಿಂಗ್ ಅಪಘಾತದಲ್ಲಿ ಬೆಂಗಳೂರಿನ ಬಾಲಕ ಮೃತ

sh
Published on

ಚೆನ್ನೈ: ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಶನಿವಾರ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿದ್ದ ಬೆಂಗಳೂರಿನ 13 ವರ್ಷದ ಕೊಪ್ಪರಂ ಶ್ರೇಯಸ್ ಹರೀಶ್ ಮೃತಪಟ್ಟಿದ್ದಾರೆ.

ಪೋಲ್ ಪೊಸಿಷನ್‌ನಿಂದ ಸ್ಪರ್ಧೆ ಆರಂಭಿಸಿದ ಶ್ರೇಯಸ್ ಬೈಕ್ ಅಪಘಾತಕ್ಕೀಡಾಗಿದೆ. ಶ್ರೇಯಸ್ ತಲೆಗೆ ತೀವ್ರವಾದ ಪೆಟ್ಟುಬಿದ್ದಿತ್ತು. ತಕ್ಷಣವೇ ರೇಸ್ ಅರ್ಧಕ್ಕೆ ಮೊಟಕುಗೊಳಿಸಿ ಸ್ಥಳದಲ್ಲೇ ವೈದ್ಯಕೀಯ ನೆರವು ಒದಗಿಸಲಾಯಿತು. ಬಳಿಕ ಟ್ರಾಮಾ ಕೇರ್ ಆಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ನಂತರ, ಮದ್ರಾಸ್ ಮೋಟಾರ್ ಸ್ಪೋಟ್ಸ್ ಕ್ಲಬ್ನಲ್ಲಿ ಶನಿವಾರ ಮತ್ತು ಭಾನುವಾರ ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಲಾಗಿದೆ. ಜುಲೈ 26, 2010 ರಂದು ಜನಿಸಿದ, ಬೆಂಗಳೂರಿನ ಕೆನ್ಸ್ರಿ ಶಾಲೆಯ ವಿದ್ಯಾರ್ಥಿ ಶ್ರೇಯಸ್, ಪೆಟ್ರೋನಾಸ್‌ನ ರೂಕಿ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರೇಸ್‌ಗಳನ್ನು ಗೆದ್ದ ಕಾರಣ ಉದಯೋನ್ಮುಖ ತಾರೆ ಎನಿಸಿದ್ದರು.

ಈ ವರ್ಷದ ಮೇ ತಿಂಗಳಿನಲ್ಲಿ ಮಿನಿ ಜಿಪಿ ಇಂಡಿಯಾ ಪ್ರಶಸ್ತಿ ಜಯಿಸಿದ್ದ ಶ್ರೇಯಸ್, ಸ್ಪೇನ್‌ನಲ್ಲಿ ನಡೆದ ಮಿನಿ ಜಿಪಿ ರೇಸ್‌ಗಳಲ್ಲಿ ಭಾಗವಹಿಸಿದ್ದರು, ಎರಡೂ ರೇಸ್‌ಗಳನ್ನು ಐದು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಸ್ಪರ್ಧೆ ಮುಗಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net