ಈ ಷರತ್ತಿಗೆ ಒಪ್ಪಿಕೊಂಡ್ರೆ ಟೀಮ್ ಇಂಡಿಯಾಗೆ ಏಷ್ಯಾಕಪ್​ ಟ್ರೋಫಿ, ಮೆಡಲ್​ ಕೊಡ್ತೀನಿ: ಮೊಹ್ಸಿನ್​ ನಖ್ವಿ | Asia Cup Trophy

ವಿಜಯವಾಣಿ (7)
Published on

Asia Cup Trophy: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯದಲ್ಲಿ 3ನೇ ಬಾರಿಗೆ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ, ದಾಖಲೆಯ ಗೆಲುವು ಸಾಧಿಸಿತು. ಆದರೆ, ಪಂದ್ಯ ಗೆದ್ದ ಟೀಮ್ ಇಂಡಿಯಾಗೆ ಟ್ರೋಫಿ ಮತ್ತು ಮೆಡಲ್​ಗಳನ್ನು ಕೊಡದೆ, ಅವುಗಳನ್ನು ತನ್ನೊಂದಿಗೆ ಮೈದಾನದಿಂದ ಹೊತ್ತೊಯ್ದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ನಡೆಗೆ ಸದ್ಯ ವ್ಯಾಪಕ ಛೀಮಾರಿ ವ್ಯಕ್ತವಾಗುತ್ತಿದೆ.

ಟೀಮ್ ಇಂಡಿಯಾ ಟ್ರೋಫಿ ಗೆದ್ದು ಇಂದಿಗೆ ಎರಡು ದಿನಗಳೇ ಕಳೆದಿವೆ. ಇಷ್ಟಾದರೂ ಸಹ ಮೊಹ್ಸಿನ್ ನಖ್ವಿ ತನ್ನೊಂದಿಗೆ ಹೊತ್ತೊಯ್ದ ಏಷ್ಯಾಕಪ್ ಟ್ರೋಫಿ ಮತ್ತು ಮೆಡಲ್​ಗಳನ್ನು ಹಸ್ತಾಂತರಿಸಲು ಮುಂದಾಗಿಲ್ಲ. ಇದಕ್ಕೆ ಬಿಸಿಸಿಐ ತೀವ್ರ ಕಿಡಿಕಾರಿದ್ದು, ಭಾರತೀಯ ಕ್ರಿಕೆಟ್​ ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ಈಗಾಗಲೇ ಐಸಿಸಿಗೆ ದೂರು ಕೊಟ್ಟಿರುವ ಬಿಸಿಸಿಐ, ನಮಗೆ ಒಲಿದ ಪ್ರಶಸ್ತಿ ಮತ್ತು ಮೆಡಲ್​ಗಳು ವಾಪಾಸ್​ ಬರಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ತಿಳಿಸಿತ್ತು. ವರದಿಗಳ ಪ್ರಕಾರ, ಒಂದು ಷರತ್ತು ಮುಂದಿಟ್ಟಿರುವ ನಖ್ವಿ, ಭಾರತ ಇದಕ್ಕೆ ಓಕೆ ಎನ್ನುವುದಾದರೆ ನಾನು ಟ್ರೋಫಿ ಕೊಡ್ತೀನಿ ಎಂದಿದ್ದಾರಂತೆ.

'ಕ್ರಿಕ್​ ಬಜ್'​ ವರದಿ ಪ್ರಕಾರ, ಆಯೋಜಕರ ಬಳಿ ಮಾತನಾಡಿರುವ ಮೊಹ್ಸಿನ್ ನಖ್ವಿ, ಸೂರ್ಯಕುಮಾರ್​ ಯಾದವ್​ ಮತ್ತು ಅವರ ತಂಡದ ಸದಸ್ಯರಿಗೆ ಟ್ರೋಫಿ ಮತ್ತು ಮೆಡಲ್​ಗಳನ್ನು ಹಸ್ತಾಂತರಿಸುತ್ತೇನೆ. ಆದರೆ, ಅದಕ್ಕೆ ಸೂಕ್ತ ವೇದಿಕೆ ಸಜ್ಜಾಗಬೇಕು. ಅಲ್ಲಿ ನಾನು ಟ್ರೋಫಿಯನ್ನು ಗೆದ್ದ ತಂಡಕ್ಕೆ ಕೊಡುತ್ತೇನೆ ಎಂದು ಹೇಳಿದ್ದಾರಂತೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿ ನೋಡುವುದಾದರೆ, ಅದೆಲ್ಲವೂ ನಖ್ವಿಯ ಕನಸಿಗಷ್ಟೇ ಸೀಮಿತ ಎನ್ನಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net