

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಬೇಗನೆ ನಿಯಂತ್ರಿಸಲು ಬೌಲರ್‌ಗಳ ವಿಲವಾದ ಬಳಿಕ ಹೊನಲುಬೆಳಕಿನಡಿ ನಸುಗೆಂಪು ಬಣ್ಣದ ಚೆಂಡನ್ನು ಸಮರ್ಥವಾಗಿ ಎದುರಿಸಲು ಬ್ಯಾಟರ್‌ಗಳು ಪರದಾಡುವುದರೊಂದಿಗೆ ಭಾರತ ತಂಡ ಹಾಲಿ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಮೊದಲ ಬಾರಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (140 ರನ್, 141 ಎಸೆತ, 17 ಬೌಂಡರಿ, 4 ಸಿಕ್ಸರ್) ಬಿರುಸಿನ ಶತಕ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ (33ಕ್ಕೆ 2) ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡ ಎರಡನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್‌ನ ಹಿನ್ನಡೆಯನ್ನು ಹಿಮ್ಮೆಟ್ಟಿಸುವ ಮೊದಲೇ ತಂಡದ ಅಗ್ರ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡಿರುವ ರೋಹಿತ್ ಶರ್ಮ ಪಡೆ ಸೋಲಿನ ಆತಂಕ ಎದುರಿಸಿದೆ.
ಹೆಡ್-ಸಿರಾಜ್ ಮಾತಿನ ಚಕಮಕಿ...
ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿ ಉಭಯ ತಂಡಗಳ ಆಟಗಾರರ ವಾಕ್ಸಮರಕ್ಕೂ ಸಾಕ್ಷಿಯಾಗಿದೆ. ಅಹರ್ನಿಶಿ ಟೆಸ್ಟ್‌ನ 2ನೇ ದಿನ ಶತಕವೀರ ಟ್ರಾವಿಸ್ ಹೆಡ್ ಅವರನ್ನು ಬೌಲ್ಡ್ ಮಾಡಿದ ವೇಳೆ ವೇಗಿ ಮೊಹಮದ್ ಸಿರಾಜ್ ಆಕ್ರಮಣಕಾರಿ ವರ್ತನೆ ತೋರಿ ಪಂದ್ಯದ ಬಿಸಿ ಏರಿಸಿದ್ದಾರೆ. ಆಸೀಸ್‌ನ ಇನಿಂಗ್ಸ್‌ನ 82ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿತು.
ಪಂದ್ಯದ ಬಳಿಕ ಮಾತನಾಡಿದ ಹೆಡ್, ಸಿರಾಜ್ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿರಾಜ್ ಡೆಸ್ಸಿಂಗ್ ರೂಮ್‌ಗೆ ತೆರಳುವಂತೆ ಕೈ ಸನ್ನೆ ಮಾಡಿದಾಗ, ನಾನು ಅವರಿಗೆ ಉತ್ತಮವಾಗಿ ಬೌಲಿಂಗ್ ಮಾಡಿದೆ ಎಂದು ಹೇಳಿದೆ. ಆದರೆ ಅವರಿಗೆ ಅದು ಬೇರೆ ರೀತಿಯಲ್ಲಿ ಕೇಳಿಸಿದೆ. ಅವರ ವರ್ತನೆಯೂ ನನಗೆ ಅಸಮಾಧಾನ ತಂದಿದೆ. ಜತೆಗೆ ಸಿರಾಜ್ ವರ್ತನೆ ಅವರು ಹೇಗೆ ತಮ್ಮನ್ನು ಪ್ರತಿನಿಧಿಸಿಕೊಳ್ಳುತ್ತಾರೆ ಎಂಬುದು ತೋರಿಸುತ್ತದೆ ಎಂದು ಮಾತಿನ ಚಕಮಕಿಗೆ ಸ್ಪಷ್ಟನೆ ನೀಡಿದರು. ಟ್ರಾವಿಸ್ ಹೆಡ್ ವೈಯಕ್ತಿಕ 76 ರನ್‌ಗಳಿಸಿದಾಗ ಫೀಲ್ಡಿಂಗ್‌ನಲ್ಲಿ ಕ್ಯಾಚ್ ಕೈ ಬಿಟ್ಟಿದ ಸಿರಾಜ್, ಬೌಲಿಂಗ್‌ನಲ್ಲಿ ಒಂದು ಸಿಕ್ಸರ್ ಸಹ ಚಚ್ಚಿಸಿಕೊಂಡಿದ್ದರು. ಸಿರಾಜ್ ವರ್ತನೆಗೆ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಆತ ಕೇವಲ 4, 5 ರನ್‌ಗಳಿಗೆ ಔಟಾಗಿಲ್ಲ, 140 ರನ್‌ಗಳಿಸಿದ್ದಾರೆ ಆತನ ವಿಕೆಟ್ ಪಡೆದಾಗ ಉತ್ತಮ ವರ್ತನೆ ಅಗತ್ಯ. ಸಿರಾಜ್ ಈ ರೀತಿಯ ವರ್ತನೆ ತೋರಿರುವುದು ಅನಗತ್ಯ ಎಂದಿದ್ದಾರೆ.
379: 2ನೇ ದಿನದಾಟ 379 ರನ್ ಸಿಡಿಯಿತು. ಅಹರ್ನಿಶಿ ಟೆಸ್ಟ್ ಪಂದ್ಯದ ದಿನದಾಟವೊಂದರಲ್ಲಿ ದಾಖಲಾದ 2ನೇ ಗರಿಷ್ಠ ಮೊತ್ತ ಇದಾಗಿದೆ. 2019ರಲ್ಲಿ ಆಸ್ಟ್ರೇಲಿಯಾ-ಪಾಕ್ ನಡುವಿನ ಪಂದ್ಯದಲ್ಲಿ 383 ರನ್ ದಾಖಲಾಗಿರುವುದು ಮೊದಲ ಗರಿಷ್ಠ ರನ್.
2ನೇ ದಿನ 51,643 ಪೇಕ್ಷಕರು
ದಾಖಲೆಯ ಪ್ರೇಕ್ಷಕರ ಹಾಜರಾತಿಗೆ ಸಾಕ್ಷಿಯಾಗಿದ್ದ ಅಹರ್ನಿಶಿ ಟೆಸ್ಟ್‌ನ ಮೊದಲ ದಿನದ ಸಂಖ್ಯೆಯನ್ನು ಎರಡನೇ ದಿನದ ಹಾಜರಾತಿ ಅಳಿಸಿಹಾಕಿದೆ. 53 ಸಾವಿರ ಆಸನ ಸಾಮಥ್ಯ ಹೊಂದಿರುವ ಅಡಿಲೇಡ್ ಓವಲ್ ಮೈದಾನದಲ್ಲಿ ಶನಿವಾರ 51,643 ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು. ಇದು ಶುಕ್ರವಾರ ಹಾಜರಿದ್ದ 50,186 ಜನರಿಗಿಂತ ಅಧಿಕ ಎನಿಸಿದೆ.
1. ಸ್ಟೀವನ್ ಸ್ಮಿತ್ ಅವರನ್ನು ಆಸೀಸ್ ನೆಲದಲ್ಲಿ ಒಂದಂಕಿ ಮೊತ್ತಕ್ಕೆ ಮೂರು ಬಾರಿ ಔಟ್ ಮಾಡಿದ ಮೊದಲ ವೇಗಿ ಜಸ್‌ಪ್ರೀತ್ ಬುಮ್ರಾ.
2. ಆಸೀಸ್‌ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ನಾಯಕ, ಭಾರತ ತಂಡದ ನಾಯಕನ ವಿಕೆಟ್ ಕಬಳಿಸಿದ ಎರಡನೇ ದೃಷ್ಟಾಂತ ಇದಾಗಿದೆ. 1968ರಲ್ಲಿ ಆಸ್ಟ್ರೇಲಿಯಾ ಬಾಬ್ ಸಿಪ್ಸನ್ ಭಾರತದ ಎಂಎಕೆ ಪಟೌಡಿ ವಿಕೆಟ್ ಕಬಳಿಸಿದ್ದರು.