ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಪಿತೃವಿಯೋಗ, ತವರಿಗೆ ಮರಳಲು ಕ್ವಾರಂಟೈನ್ ಅಡ್ಡಿ

siraj web
Published on

ಸಿಡ್ನಿ: ಟೆಸ್ಟ್ ತಂಡದ ಭಾಗವಾಗಿ ಆಸೀಸ್ ಪ್ರವಾಸಕ್ಕೆ ತೆರಳಿರುವ ವೇಗಿ ಮೊಹಮದ್ ಸಿರಾಜ್ ಅವರ ತಂದೆ ಮೊಹಮದ್ ಗೌಸ್ (53 ವರ್ಷ) ಶುಕ್ರವಾರ ಹೈದರಾಬಾದ್‌ನಲ್ಲಿ ನಿಧನ ಹೊಂದಿದ್ದಾರೆ. ಸಿಡ್ನಿಯಲ್ಲಿ ತಂಡದ ಜತೆಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಸಿರಾಜ್‌ಗೆ ಈ ಆಘಾತ ಸುದ್ದಿ ಅಪ್ಪಳಿಸಿತ್ತು. ಆದರೆ ಆಸ್ಟ್ರೇಲಿಯಾದಲ್ಲಿನ ಕ್ವಾರಂಟೈನ್ ನಿಯಮದನ್ವಯ ಅವರು ತವರಿಗೆ ಮರಳುವಂತಿಲ್ಲ. ಹೀಗಾಗಿ ತಂದೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ.

‘ನನ್ನ ಮಗ ನನ್ನ ದೇಶಕ್ಕೆ ಹೆಮ್ಮೆ ತರಬೇಕು ಎಂಬುದು ಯಾವಾಗಲೂ ನನ್ನ ತಂದೆಯ ಆಸೆಯಾಗಿತ್ತು. ನಾನು ಖಂಡಿತವಾಗಿಯೂ ಅದನ್ನು ಸಾಧಿಸಿ ತೋರಿಸುತ್ತೇನೆ’ ಎಂದು 26 ವರ್ಷದ ಸಿರಾಜ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಸಿರಾಜ್ ಆಡುತ್ತಿದ್ದಾಗ ತಂದೆಯ ಅನಾರೋಗ್ಯದ ಸುದ್ದಿ ಅವರಿಗೆ ಆಘಾತ ನೀಡಿತ್ತು. ಅದರ ನಡುವೆಯೂ ಅವರು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 2 ಮೇಡನ್ ಓವರ್ ಸಹಿತ 8 ರನ್‌ಗೆ 3 ವಿಕೆಟ್ ಕಬಳಿಸಿ ಅಮೋಘ ನಿರ್ವಹಣೆ ತೋರಿದ್ದರು. ಅದರ ಬೆನ್ನಲ್ಲೇ ತಂದೆಯ ಆರೋಗ್ಯ ಸುಧಾರಣೆಯ ಸುದ್ದಿ ಅವರಿಗೆ ಸಮಾಧಾನ ತಂದಿತ್ತು. ಐಪಿಎಲ್ ಬಳಿಕ ಭಾರತ ಟೆಸ್ಟ್ ತಂಡದ ಭಾಗವಾಗಿ ಅವರು ಯುಎಇಯಿಂದಲೇ ಆಸೀಸ್‌ಗೆ ಪ್ರಯಾಣಿಸಿದ್ದರು.

‘ಆಟೋ ಚಾಲಕರಾಗಿ ನನ್ನ ತಂದೆ ಆರಂಭಿಕ ದಿನಗಳಲ್ಲಿ ಎದುರಿಸಿರುವ ಕಷ್ಟಗಳ ಬಗ್ಗೆ ನನಗೆ ಗೊತ್ತಿದೆ. ನನ್ನ ಕ್ರಿಕೆಟ್ ಜೀವನಕ್ಕೆ ಅವರ ಕೊಡುಗೆ ಅಪಾರವಾದುದು. ನನ್ನ ಜೀವನದ ಅತಿದೊಡ್ಡ ಬೆಂಬಲದ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ನಾನು ದೇಶಕ್ಕಾಗಿ ಆಡಬೇಕೆಂಬುದು ಅವರ ಕನಸಾಗಿತ್ತು. ಅವರ ಆಸೆಯನ್ನು ಈಡೇರಿಸಿರುವುದು ಮತ್ತು ಅವರಿಗೆ ಖುಷಿ ನೀಡಿರುವುದು ನನ್ನ ಭಾಗ್ಯ’ ಎಂದು ಸಿರಾಜ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net