ಜನೈ ಭೋಸ್ಲೆ ಜತೆಗಿನ ಪ್ರೀತಿ ವದಂತಿ! ಕಡೆಗೂ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಮೌನಮುರಿದ ಸಿರಾಜ್​ | Zanai Bhosle

ವಿಜಯವಾಣಿ - 2025-01-27T081347.116
Published on

Mohammed Siraj: ತಾನಾಯಿತು, ತನ್ನ ಕ್ರಿಕೆಟ್​ ಆಯಿತು ಎನ್ನುವ ಟೀಮ್​ ಇಂಡಿಯಾದ ಸ್ಟಾರ್​ ವೇಗಿ​ ಮೊಹಮ್ಮದ್ ಸಿರಾಜ್, ಮೈದಾನದಲ್ಲಿ ಹೆಚ್ಚು ಕಾಣಿಸುತ್ತಾರೆಯೇ ಹೊರತು ಹೊರಗೆ ಅಷ್ಟಾಗಿ ಎಲ್ಲಿಯೂ ಕಾಣಿಸೋದಿಲ್ಲ. ಹೀಗಿರುವಾಗ ಸಿರಾಜ್​ ಪ್ರೀತಿಯಲ್ಲಿ ಬಿದ್ದಿದ್ದಾರೆ. ಕಡೆಗೂ ಸಿರಾಜ್ ತಮ್ಮ ಬಾಳಸಂಗಾತಿ ಬಗ್ಗೆ ಹೊಸ ಫೋಟೋ ಹಂಚಿಕೊಂಡಿದ್ದಾರೆ ಎಂಬ ಸುದ್ದಿಗಳು ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಟಿ ಹಾಗೂ ಖ್ಯಾತ ಗಾಯಕಿ (Zanai Bhosle) ಜತೆ ಡೇಟಿಂಗ್ ಮಾಡುತ್ತಿರುವುದಾಗಿ ವದಂತಿಗಳು ಹರಿದಾಡಿವೆ. ಇತ್ತೀಚೆಗೆ, ಸಿರಾಜ್, ಗಾಯಕಿಯ ಹುಟ್ಟುಹಬ್ಬದ ಆಚರಣೆಯಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದೇ ಈಗ ಸಿರಾಜ್​ಗೆ ತೊಂದರೆಯಾಗಿ ಕಾಡಿದೆ.

ಖ್ಯಾತ ಬಾಲಿವುಡ್ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ ನೆಟ್ಟಿಗರು ಸಿರಾಜ್ ಭಾಯ್, ಜನೈ ಭೋಸ್ಲೆ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕಮೆಂಟ್​ ಹಾಕಿ, ಆ ವಿಷಯವನ್ನು ಕ್ಷಣಮಾತ್ರದಲ್ಲಿ ವೈರಲ್ ಮಾಡಿದರು. ಸಿರಾಜ್​ ಮತ್ತು ಜನೈ ಫೋಟೋ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಮನಸ್ಸಿಗೆ ಬಂದಿದ್ದನ್ನು ಕಮೆಂಟ್​ನಲ್ಲಿ ವ್ಯಕ್ತಪಡಿಸಿದ್ದಾರೆ. ತನ್ನ ಖಾಸಗಿ ಜೀವನಕ್ಕೆ ತೊಂದರೆ ಮಾಡುವಂತ ಸುದ್ದಿಗಳು ತೀವ್ರ ಚರ್ಚೆಯಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಿರಾಜ್​, ಇದೆಲ್ಲ ಸುಳ್ಳು ಎಂದಿದ್ದಾರೆ.

ಮೊದಲು ಇದಕ್ಕೆ ಪ್ರತಿಕ್ರಿಯಿಸಿದ ಜನೈ ಭೋಸ್ಲೆ, ಯಾವ ಫೋಟೋವನ್ನು ನೆಟ್ಟಿಗರು ಮುಂದಿಟ್ಟು ವದಂತಿಗಳನ್ನು ಹಬ್ಬಿಸುತ್ತಿದ್ದರೋ ಅದೇ ಫೋಟೋವನ್ನು ಹಂಚಿಕೊಂಡು, ಸಿರಾಜ್​ ನನ್ನ ಪ್ರೀತಿಯ ಸಹೋದರ ಎಂದು ಸ್ಪಷ್ಟನೆ ನೀಡಿದ್ದಾರೆ. ಕಡೆಗೂ ಈ ಮೂಲಕ ತಮ್ಮ ವಿರುದ್ಧ ಕೇಳಿಬಂದ ವ್ಯಾಪಕ ವದಂತಿಗಳಿಗೆ ಜನೈ ತೆರೆ ಎಳೆದಿದ್ದಾರೆ. ಇನ್ನು ಜನೈ ಹಾಕಿದ ಪೋಸ್ಟ್​ ಅನ್ನೇ ತಾನು ಹಂಚಿಕೊಂಡ ಮೊಹಮ್ಮದ್​ ಸಿರಾಜ್​, ಆಕೆ ನನ್ನ ಪ್ರೀತಿಯ ಸಹೋದರಿ ಎಂದು ಹೇಳಿ, ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ. ಸದ್ಯ ಇಬ್ಬರಿಂದಲೂ ಸ್ಪಷ್ಟನೆ ದೊರಕಿದ್ದು, ತಮ್ಮಿಬ್ಬರ ನಡುವೆ ಅಣ್ಣ-ತಂಗಿ ಸಂಬಂಧ ಇದೆ ಎಂಬುದನ್ನು ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net