ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್​ ಸರಣಿಗೆ ಶಮಿ ಅನುಮಾನ; ಆತಿಥೇಯರಿಗೂ ಪ್ರಮುಖ ಆಟಗಾರರ ಅಲಭ್ಯತೆ ಭೀತಿ!

shami web
Published on

ಬೆಂಗಳೂರು: ಏಕದಿನ ವಿಶ್ವಕಪ್​ನಲ್ಲಿ ಮಿಂಚಿದ ಹಿರಿಯ ವೇಗಿ ಮೊಹಮದ್​ ಶಮಿ ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ದಕ್ಷಿಣ ಆಫ್ರಿಕಾ ಪ್ರವಾಸದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಫಿಟ್​ ಆಗುವುದು ಅನುಮಾನವೆನಿಸಿದೆ. ನವೆಂಬರ್​ 30ರಂದು ಪ್ರಕಟಿಸಲಾದ ಭಾರತ ಟೆಸ್ಟ್​ ತಂಡದಲ್ಲಿ 33 ವರ್ಷದ ಶಮಿ ಸ್ಥಾನ ಪಡೆದಿದ್ದಾರೆ. ಆದರೆ ಪೂರ್ಣ ಚೇತರಿಕೆ ಕಂಡರೆ ಮಾತ್ರ ಆಡುತ್ತಾರೆ ಎಂದು ಬಿಸಿಸಿಐ ತಿಳಿಸಿತ್ತು.

ಡಿಸೆಂಬರ್​ 26ರಿಂದ ಸೆಂಚುರಿಯನ್​ನಲ್ಲಿ ಮೊದಲ ಟೆಸ್ಟ್​ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ವೇಗಿ ಜಸ್​ಪ್ರೀತ್​ ಬುಮ್ರಾ ಸಹಿತ ಟೆಸ್ಟ್​ ತಂಡದ ಆಟಗಾರರು ಶುಕ್ರವಾರ ಜೊಹಾನ್ಸ್​ರ್ಬಗ್​ಗೆ ವಿಮಾನ ಏರಲಿದ್ದಾರೆ. ಆದರೆ ಶಮಿ ಅವರೊಂದಿಗೆ ತೆರಳುವುದು ಅನುಮಾನವೆನಿಸಿದೆ. ಅಜಿತ್​ ಅಗರ್ಕರ್​ ಸಾರಥ್ಯದ ಆಯ್ಕೆ ಸಮಿತಿ, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಭಾರತ ಎ ತಂಡದ ಪರ ಆಡುತ್ತಿರುವ ಯುವ ವೇಗಿಗಳಲ್ಲೇ ಯಾರಾದರೊಬ್ಬರನ್ನು ಶಮಿ ಬದಲಿಗೆ ಟೆಸ್ಟ್​ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ.

ಮುಂದಿನ ವರ್ಷ ಜನವರಿ 25ರಿಂದ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ಭಾರತ ತಂಡ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಇದರಲ್ಲಿ ಶಮಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಶಮಿ ಮೊಣಕಾಲು ನೋವಿನ ನಡುವೆಯೇ ವಿಶ್ವಕಪ್​ನಲ್ಲಿ ಆಡಿದ್ದರು. 7 ಪಂದ್ಯಗಳಲ್ಲೇ 24 ವಿಕೆಟ್​ ಕಬಳಿಸಿದ್ದ ಅವರು, ಬೌಲಿಂಗ್​ ರನ್​ಅಪ್​ನಲ್ಲಿ ಚೆಂಡೆಸೆಯುವ ಹಂತದಲ್ಲಿ ಬಲಗಾಲನ್ನು ನೆಲದ ಮೇಲಿಡುವ ವೇಳೆ ನೋವು ಅನುಭವಿಸುತ್ತಿದ್ದರು ಎನ್ನಲಾಗಿದೆ.

ರಬಾಡ, ಬವುಮಾ ಡೌಟ್​

ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಮತ್ತು ವೇಗಿ ಕಗಿಸೊ ರಬಾಡ ಭಾರತ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಡುವುದು ಅನುಮಾನವೆನಿಸಿದೆ. ಸೀಮಿತ ಓವರ್​ ಸರಣಿಯಿಂದ ವಿಶ್ರಾಂತಿ ಪಡೆದಿರುವ ಇವರಿಬ್ಬರು, ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ಗುರುವಾರ ದೇಶೀಯ ಪ್ರಥಮ ದರ್ಜೆ ಪಂದ್ಯದಲ್ಲಿ ಕಣಕ್ಕಿಳಿಯಬೇಕಾಗಿತ್ತು. ಆದರೆ ಇಬ್ಬರೂ ಪಂದ್ಯದಲ್ಲಿ ಆಡುತ್ತಿಲ್ಲ. ರಬಾಡ ಫಿಟ್ನೆಸ್​ ಸಮಸ್ಯೆ ಹೊಂದಿದ್ದರೆ, ಬವುಮಾ ವೈಯಕ್ತಿಕ ಕಾರಣದಿಂದಾಗಿ ಆಡುತ್ತಿಲ್ಲ ಎನ್ನಲಾಗಿದೆ. ಪ್ರಮುಖವಾಗಿ ರಬಾಡ ಗೈರು ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್​ ವಿಭಾಗಕ್ಕೆ ದೊಡ್ಡ ಹೊಡೆತವಾಗಲಿದೆ. ಈಗಾಗಲೆ ಅನ್ರಿಚ್​ ನೋಕಿಯಾ ಅಲಭ್ಯರಾಗಿದ್ದರೆ, ಲುಂಗಿ ಎನ್​ಗಿಡಿ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರಮುಖ ಮೂವರು ವೇಗಿಗಳಿಲ್ಲದೆ ಆಡುವ ಸವಾಲು ಹರಿಣಗಳಿಗೆ ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net