ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ ಮೀರಾಬಾಯಿ

web meera web
Published on

ಫುಕೆಟ್​ (ಥಾಯ್ಲೆಂಡ್​): ಟೋಕಿಯೊ ಒಲಿಂಪಿಕ್ಸ್​ ರಜತ ವಿಜೇತ ವೇಟ್​ಲಿಫ್ಟರ್​ ಮೀರಾಬಾಯಿ ಚಾನು ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ್ದಾರೆ. ಐಡಬ್ಲ್ಯುಎಫ್​ ವಿಶ್ವಕಪ್​ನಲ್ಲಿ ಸೋಮವಾರ ನಡೆದ ಮಹಿಳೆಯರ 49 ಕೆಜಿ ವಿಭಾಗದ ಬಿ ಗ್ರೂಪ್​ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮೀರಾಬಾಯಿ ಈ ಸಾಧನೆ ಮಾಡಿದರು. ಒಲಿಂಪಿಕ್ಸ್​ ಅರ್ಹತೆ ಬಯಸುವ ವೇಟ್​ಲಿಫ್ಟರ್​ಗಳು ಈ ಕೂಟದಲ್ಲಿ ಸ್ಪರ್ಧಿಸುವುದು ಕಡ್ಡಾಯವಾಗಿತ್ತು.

ಗಾಯದಿಂದ ಚೇತರಿಸಿಕೊಂಡು 6 ತಿಂಗಳ ಬಳಿಕ ಮರಳಿ ಸ್ಪರ್ಧಾಕಣಕ್ಕಿಳಿದ 29 ವರ್ಷದ ಮೀರಾ ಒಟ್ಟು 184 ಕೆಜಿ ಭಾರ (81ಕೆಜಿ+103 ಕೆಜಿ) ಎತ್ತಿದರು. ಕೂಟದಲ್ಲಿ ಪದಕ ಗೆಲ್ಲದಿದ್ದರೂ, ಸ್ಪರ್ಧೆಯಲ್ಲಿ ಭಾಗವಹಿಸಿದ ಕಾರಣದಿಂದಲೇ ಮೀರಾಗೆ ಒಲಿಂಪಿಕ್ಸ್​ ಅರ್ಹತೆ ಖಚಿತವೆನಿಸಿತು. ಮಣಿಪುರದ ತಾರೆ ಮೀರಾ ಕೂಟದಲ್ಲಿ ತನ್ನ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸದಿದ್ದರೂ, ಕೂಟದಲ್ಲಿ ಕಡ್ಡಾಯವಾಗಿ ಭಾಗವಹಿಸುವ ಔಪಚಾರಿಕತೆ ಪೂರ್ಣಗೊಳಿಸಿದರು.

ಮೀರಾ ಸ್ನ್ಯಾಚ್​ನಲ್ಲಿ 75, 79, 81 ಕೆಜಿ ಹಾಗೂ ಕ್ಲೀನ್​ ಆಂಡ್​ ರ್ಜಕ್​ನಲ್ಲಿ 98, 103 ಮತ್ತು 106 ಕೆಜಿ ಭಾರ ಎತ್ತಿದರು. ತನ್ನ ನೆಚ್ಚಿನ ಕ್ಲೀನ್​ ಆಂಡ್​ ರ್ಜಕ್​ನಲ್ಲಿ ಮೀರಾ 2021ರ ಏಷ್ಯನ್​ ಚಾಂಪಿಯನ್​ಷಿಪ್​ನಲ್ಲಿ 119 ಕೆಜಿ ಭಾರ ಎತ್ತಿದ್ದು ಗರಿಷ್ಠವಾಗಿದೆ. ಒಲಿಂಪಿಕ್ಸ್​ ಅರ್ಹತಾ ರ್ಯಾಂಕಿಂಗ್​ನಲ್ಲಿ ಮೀರಾ ಸದ್ಯ 2ನೇ ಸ್ಥಾನದಲ್ಲಿದ್ದು, ಕೂಟದಲ್ಲಿ ಭಾಗವಹಿಸಿದ ಆಯಾ ದೇಹತೂಕ ವಿಭಾಗದ ಅಗ್ರ 10 ವೇಟ್​ಲ್ಟಿರ್​ಗಳಿಗೆ ಒಲಿಂಪಿಕ್ಸ್​ ಅರ್ಹತೆ ಲಭಿಸಲಿದೆ. ಹೀಗಾಗಿ ಕೂಟ ಮುಕ್ತಾಯಗೊಂಡ ಬಳಿಕ ಮೀರಾಗೆ ಒಲಿಂಪಿಕ್ಸ್​ ಅರ್ಹತೆ ಅಧಿಕೃತವೆನಿಸಲಿದೆ.

2017ರ ವಿಶ್ವ ಚಾಂಪಿಯನ್​ ಮೀರಾಬಾಯಿ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಹಾಂಗ್​ರೆೌ ಏಷ್ಯನ್​ ಗೇಮ್ಸ್​ನಲ್ಲಿ ಕೊನೆಯದಾಗಿ ಸ್ಪರ್ಧಿಸಿದ್ದರು. ಮೀರಾಬಾಯಿ ಜುಲೈ 26ರಿಂದ ನಡೆಯಲಿರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ವೇಟ್​ಲಿಫ್ಟರ್​ ಆಗಿರಲಿದ್ದಾರೆ. ಅವರಿಗೆ ಇದು 3ನೇ ಒಲಿಂಪಿಕ್ಸ್​ ಆಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net