

ಬೆಂಗಳೂರು: ಕರ್ನಾಟಕ ರಾಜ್ಯದ ಮೊದಲ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೋಮವಾರ ಸಂಜೆ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. 14 ವಯೋಮಿತಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ 18 ಕ್ರೀಡಾ ಸ್ಪರ್ಧೆಗಳು ಮುಂದಿನ ಒಂದು ವಾರಗಳ ಕಾಲ ನಡೆಯಲಿವೆ. ಫೆಬ್ರವರಿ 9 ರಂದು ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ವತಿಯಿಂದ ಈ ಕೂಟ ಏರ್ಪಡಿಸಲಾಗಿದೆ. ಕ್ರೀಡಾ ಸ್ಪರ್ಧೆಗಳ ಹಾಗೂ ಸ್ಥಳಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಆಪ್ ಕೂಡ ಬಿಡುಗಡೆ ಮಾಡಲಾಗಿದೆ.
ರಾಜ್ಯದಾದ್ಯಂತ 4 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ಕ್ರೀಡಾ ಸಿಬ್ಬಂದಿ ಈ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಕ್ರೀಡಾಪಟುಗಳಿಗೆ ಕಂಠೀರವ ಹಾಗೂ ವಿದ್ಯಾನಗರದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಕ್ರೀಡಾ ಸಂಸ್ಥೆಗಳು ಶಿಫಾರಸು ಮಾಡುವ ಅಗ್ರ 8 ತಂಡಗಳು ತಂಡದ ವಿಭಾಗದಲ್ಲಿ ಸ್ಪರ್ಧಿಸಿದರೆ, ಪ್ರತಿ ಜಿಲ್ಲೆಯಿಂದ ತಲಾ 10 ಅಥ್ಲೀಟ್ಗಳಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಕಂಠೀರವ ಹೊರಾಂಗಣ ಹಾಗೂ ಒಳಾಂಗಣ ಸ್ಟೇಡಿಯಂ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. 18 ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಕ್ರೀಡಾಕೂಟಕ್ಕೆ 2 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಕ್ರೀಡಾಕೂಟದಲ್ಲಿ ಉತ್ತಮ ನಿರ್ವಹಣೆ ತೋರುವ ಕ್ರೀಡಾಪಟುಗಳನ್ನು ಮುಂದಿನ ದಿನಗಳಲ್ಲಿ ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಹಾಸ್ಟೆಲ್ಗಳಿಗೆ ಆಯ್ಕೆಗೂ ಪರಿಗಣಿಸಲಾಗುತ್ತಿದೆ.
ಉದ್ಘಾಟನಾ ಸಮಾರಂಭದ ವೇಳೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿವಿ ಸದಾನಂದಗೌಡ ಹಾಜರಿರುವರು. ಕ್ರೀಡಾ ಸಚಿವ ಕೆಎಸ್ ಈಶ್ವರಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದಾರೆ. ಬೆಂಗಳೂರು ನಗರದ ವಿಧಾನ ಸಭಾ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.