

ಬೆಂಗಳೂರು: ಕರ್ನಾಟಕ ಕ್ರೀಡಾ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ‘ಮಿನಿ ಒಲಿಂಪಿಕ್ಸ್’ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಫೆಬ್ರವರಿ 3ರಿಂದ 9ರವರೆಗೆ 14 ವಯೋಮಿತಿ ವಿಭಾಗದವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ವತಿಯಿಂದ ಈ ಕೂಟ ಏರ್ಪಡಿಸಲಾಗಿದೆ ಎಂದು ಕ್ರೀಡಾ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದರು.
ಸೋಮವಾರ ಯವನಿಕಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದರು. ಕಂಠೀರವ ಹೊರಾಂಗಣ ಹಾಗೂ ಒಳಾಂಗಣ ಸ್ಟೇಡಿಯಂ ಸ್ಟೇಡಿಯಂ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸುಮಾರು 18 ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಕ್ರೀಡಾಕೂಟಕ್ಕೆ 2 ಕೋಟಿ ರೂ. ಅನುದಾನವನ್ನು ಕರ್ನಾಟಕ ಸರ್ಕಾರ ನೀಡಿದೆ ಎಂದು ಸಚಿವರು ತಿಳಿಸಿದರು. ರಾಜ್ಯದಾದ್ಯಂತ 4 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ಕ್ರೀಡಾ ಸಿಬ್ಬಂದಿ ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಪಟುಗಳಿಗೆ ಕಂಠೀರವ ಹಾಗೂ ವಿದ್ಯಾನಗರದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು. ರಾಜ್ಯ ಕ್ರೀಡಾ ಸಂಸ್ಥೆಗಳು ಶಿಫಾರಸು ಮಾಡುವ ಅಗ್ರ 8 ತಂಡಗಳು ತಂಡ ವಿಭಾಗದಲ್ಲಿ ಸ್ಪರ್ಧಿಸಿದರೆ, ಪ್ರತಿ ಜಿಲ್ಲೆಯಿಂದ ತಲಾ 10 ಅಥ್ಲೀಟ್ಗಳಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದೇ ವೇಳೆ ಕ್ರೀಡಾಕೂಟ ಸಂಬಂಧಿತ ಮಾಹಿತಿಗಾಗಿ ಆಪ್ ಹಾಗೂ ವೆಬ್ಸೈಟ್ ಬಿಡುಗಡೆ ಮಾಡಲಾಯಿತು.