

ಬೆಂಗಳೂರು: ಹಾಕಿ ಬಳ್ಳಾರಿ ಹಾಗೂ ಹಾಕಿ ಕೂರ್ಗ್ ಬಾಲಕರ ತಂಡಗಳು ಮಿನಿ ಒಲಿಂಪಿಕ್ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ ಶುಭಾರಂಭ ಕಂಡಿವೆ. ಕೆಎಂ ಕಾರ್ಯಪ್ಪ ಹಾಕಿ ಸ್ಟೇಡಿಯಂನಲ್ಲಿ ಸೋಮವಾರ ಆರಂಭಗೊಂಡ ಕ್ರೀಡಾಕೂಟದ ಮೊದಲ ದಿನದ ಹಾಕಿ ಪಂದ್ಯಗಳಲ್ಲಿ ಹಾಕಿ ಬಳ್ಳಾರಿ ತಂಡ 12-0 ಗೋಲುಗಳಿಂದ ಹಾಕಿ ಗದಗ ತಂಡವನ್ನು ಸೋಲಿಸಿತು. ವಿಜಯಿ ತಂಡದ ಪರ ಕುರಾಪತಿ ರಮೇಶ್ 5 ಗೋಲು, ಕಿರಣ್ ರೆಡ್ಡಿ 4 ಗೋಲು ಗಳಿಸಿದರೆ, ಆಕಾಶ್ ಪಿಲ್ಲಾ, ಪುನೀತ್, ಮಣಿಕಂಠ ಸ್ವಾಮಿ ತಲಾ ಒಂದು ಗೋಲುಗಳಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಹಾಕಿ ಕೂರ್ಗ್ ಬಾಲಕರ ತಂಡ 16-0 ಗೋಲುಗಳಿಂದ ಹಾಕಿ ಕಲಬುರಗಿ ತಂಡವನ್ನು ಮಣಿಸಿತು. ಕುಶಾಲ್ ಬೋಪಯ್ಯ 5 ಗೋಲು, ಧ್ರುವ ಬಿಎಸ್ 3 ಗೋಲು, ವಚನ್ ಕಾಳಪ್ಪ, ಅಖಿಲ್ ಅಯ್ಯಪ್ಪ ತಲಾ 2 ಗೋಲು ಬಾರಿಸಿದರೆ, ಅಕಾಶ್ ಬಿದ್ದಪ್ಪ ಸಿಜಿ , ಚಿನ್ನಪ್ಪ ಕೆಎಸ್, ಚೆಂಗಪ್ಪ ಬಿಕೆ, ಹರ್ಷಿತ್ ಕುಮಾರ್ ತಲಾ ಒಂದು ಗೋಲುಗಳಿಸಿದರು.
ಬೆಳಗಾವಿ ತಂಡಕ್ಕೆ ಗೆಲುವು: ಕಂಠೀರವ ಸ್ಟೇಡಿಯಂನಲ್ಲಿ ನಡೆದ ಬಾಲಕರ ವಿಭಾಗದ ಫುಟ್ಬಾಲ್ ಪಂದ್ಯದಲ್ಲಿ ಬೆಂಗಳೂರು ತಂಡ 6-0ಯಿಂದ ಉತ್ತರ ಕನ್ನಡ ತಂಡವನ್ನು ಸೋಲಿಸಿದರೆ, ಬೆಳಗಾವಿ ತಂಡ 5-0ಯಿಂದ ಮೈಸೂರು ವಿರುದ್ಧ, ದಕ್ಷಿಣ ಕನ್ನಡ ತಂಡ 3-0 ಗೋಲುಗಳಿಂದ ರಾಯಚೂರು ಬಾಯ್್ಸ ತಂಡವನ್ನು ಸೋಲಿಸಿತು.
ಶಿವಮೊಗ್ಗ, ಹಾಸನ ತಂಡಗಳಿಗೆ ಜಯ: ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಗಳಲ್ಲಿ ಶಿವಮೊಗ್ಗ, ಬೆಂಗಳೂರು ನಗರ, ಹಾಸನ ಹಾಗೂ ತುಮಕೂರು ತಂಡಗಳು ಶುಭಾರಂಭ ಕಂಡರೆ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ, ಬೆಂಗಳೂರು ಸಿಟಿ, ಕೊಪ್ಪಳ, ತುಮಕೂರು ತಂಡಗಳು ಮುನ್ನಡೆ ಸಾಧಿಸಿದವು. ವಿದ್ಯಾನಗರ ಕ್ರೀಡಾ ಸಂಕೀರ್ಣದಲ್ಲಿ ನಡೆದ ನೆಟ್ಬಾಲ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಮೈಸೂರು ಬಾಲಕರ ತಂಡ 6-1 ಅಂಕಗಳಿಂದ ತುಮಕೂರು ತಂಡವನ್ನು ಸೋಲಿಸಿದರೆ, ಚಿತ್ರದುರ್ಗ ಬಾಲಕರ ತಂಡ 13-6ರಿಂದ ಹಾಸನ ಬಾಲಕರ ತಂಡವನ್ನು ಮಣಿಸಿತು.