ಭಾರತ-ಆಸೀಸ್ ಫೈಟ್; ಚೇತೇಶ್ವರ ಪೂಜಾರ 100ನೇ ಪಂದ್ಯ ಸ್ಮರಣೀಯಗೊಳಿಸುವ ತವಕ

Pujara
Published on

ನವದೆಹಲಿ: ಹಾಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಾಗ್ಪುರದಲ್ಲಿ ಆರಂಭಗೊಂಡಾಗ ರೋಚಕ ಸ್ಪರ್ಧೆಯ ನಿರೀಕ್ಷೆ ಹರಡಿತ್ತು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಮೂರೇ ದಿನಗಳಲ್ಲಿ ಗೆದ್ದ ಬಳಿಕ ಚಿತ್ರಣ ಬದಲಾಗಿದೆ. ಶುಕ್ರವಾರದಿಂದ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದ್ದರೆ, ಪ್ರವಾಸಿ ಆಸ್ಟ್ರೇಲಿಯಾ ತಂಡ ಮತ್ತೆ ಸ್ಪಿನ್ ಅಸ್ತ್ರ ಎದುರಾಗುವ ಭೀತಿಯಲ್ಲಿದೆ. ಚೇತೇಶ್ವರ ಪೂಜಾರಗೆ 100ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಉಡುಗೊರೆ ನೀಡುವ ಹಂಬಲವೂ ರೋಹಿತ್ ಶರ್ಮ ಬಳಗದ್ದಾಗಿದೆ.

ನಾಗ್ಪುರದಲ್ಲಿ ಭಾರತ ತಂಡದ ಭರ್ಜರಿ ಗೆಲುವಿನ ನಡುವೆಯೂ ಬ್ಯಾಟಿಂಗ್ ವಿಭಾಗದ ನಿರ್ವಹಣೆ ಸಮಾಧಾನಕರವಾಗಿರಲಿಲ್ಲ. ನಾಯಕ ರೋಹಿತ್ ಶರ್ಮ ಹೊರತಾಗಿ ಅಗ್ರ ಕ್ರಮಾಂಕದ ಇತರ ಬ್ಯಾಟರ್​ಗಳಿಂದ ನಿರೀಕ್ಷೆ ನಿರ್ವಹಣೆ ಬಂದಿರಲಿಲ್ಲ. ದೆಹಲಿಯಲ್ಲಿ ಭಾರತದ ಬ್ಯಾಟರ್​ಗಳು ಲಯಕ್ಕೆ ಮರಳುವ ನಿರೀಕ್ಷೆ ಇಡಲಾಗಿದೆ. ಕನ್ನಡಿಗ ಕೆಎಲ್ ರಾಹುಲ್ ತಮ್ಮ ವಿರುದ್ಧದ ಕೆಲ ಟೀಕೆಗಳಿಗೆ ಬ್ಯಾಟ್​ನಿಂದಲೇ ಉತ್ತರ ನೀಡಬೇಕಾದ ಅಗತ್ಯವಿದೆ. ಪೂಜಾರ 20ನೇ ಶತಕದೊಂದಿಗೆ ಪಂದ್ಯವನ್ನು ಸ್ಮರಣೀಯಗೊಳಿಸುವ ಅವಕಾಶವಿದೆ. ವಿರಾಟ್ ಕೊಹ್ಲಿ ಸ್ಪಿನ್ನರ್​ಗಳೆದುರು ಹೆಚ್ಚುವರಿ ಅಭ್ಯಾಸ ನಡೆಸಿರುವುದರಿಂದ ತವರು ಮೈದಾನದಲ್ಲೇ ಟೆಸ್ಟ್ ಶತಕದ ಬರ ನೀಗಿಸಿಕೊಳ್ಳುವ ನಿರೀಕ್ಷೆ ಇದೆ. ನಾಯಕ ರೋಹಿತ್ ಅವರಂತೆ ಆಕ್ರಮಣ ಮಿಶ್ರಿತ ತಾಳ್ಮೆಯ ಆಟವೇ ಸ್ಪಿನ್ ಪಿಚ್​ಗಳಲ್ಲಿ ಬ್ಯಾಟಿಂಗ್ ಯಶಸ್ಸಿಗೆ ಉತ್ತಮ ಮಾರ್ಗವೆನಿಸಿದೆ.

ಪ್ರವಾಸಿ ಆಸ್ಟ್ರೇಲಿಯಾ ತಂಡ ನಾಗ್ಪುರದಲ್ಲಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿಯ ಸ್ಪಿನ್ ದಾಳಿಯನ್ನು ಎದುರಿಸಲು ಪರದಾಡಿತ್ತು. ದೆಹಲಿಯಲ್ಲೂ ಅದೇ ಪರದಾಟ ಮುಂದುವರಿದರೆ, ಸರಣಿ ಏಕಪಕ್ಷೀಯ ವೆನಿಸಲಿದೆ. ಹೀಗಾಗಿ ಸರಣಿಯ ಕುತೂಹಲ ಹೆಚ್ಚಿಸಲು ಆಸೀಸ್ ಬ್ಯಾಟರ್​ಗಳಿಂದಲೂ ದಿಟ್ಟ ಬ್ಯಾಟಿಂಗ್ ನಿರ್ವಹಣೆಯ ಅಗತ್ಯವಿದೆ. ನಾಗ್ಪುರದಲ್ಲಿ ಮಾರ್ನಸ್ ಲಬುಶೇನ್ ಮತ್ತು ಸ್ಟೀವನ್ ಸ್ಮಿತ್ ಉತ್ತಮ ಆರಂಭ ಕಂಡಿದ್ದರೂ ಅದನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾಗಿದ್ದರು. ಎಡಗೈ ಆರಂಭಿಕ ಡೇವಿಡ್ ವಾರ್ನರ್ ಇತ್ತೀಚೆಗಿನ ವೈಫಲ್ಯದ ನಡುವೆಯೂ ಇನ್ನೊಂದು ಅವಕಾಶ ಪಡೆಯುವ ಸಾಧ್ಯತೆ ಇದೆ.

ಟ್ರೋಫಿ ಉಳಿಸಿಕೊಳ್ಳುವ ಅವಕಾಶ

ಭಾರತ ತಂಡ ದೆಹಲಿ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳುವುದು ಖಚಿತವಾಗಲಿದೆ. ಯಾಕೆಂದರೆ ನಂತರದಲ್ಲಿ ಸರಣಿಯ ಉಳಿದೆರಡು ಟೆಸ್ಟ್ ಗೆದ್ದರೂ ಆಸೀಸ್​ಗೆ ಸರಣಿ ಸಮಬಲ ಸಾಧಿಸಲಷ್ಟೇ ಅವಕಾಶವಿರುತ್ತದೆ. ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಹಾಲಿ ಚಾಂಪಿಯನ್ ಆಗಿರುವುದರಿಂದ ಭಾರತ ಸರಣಿ ಸಮಬಲಗೊಂಡರೂ ಟ್ರೋಫಿ ಉಳಿಸಿಕೊಳ್ಳಲಿದೆ. ಆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್ ಪ್ರವೇಶ ಮತ್ತು ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಒಲಿಸಿಕೊಳ್ಳಲು ಭಾರತ ಸರಣಿಯಲ್ಲಿ ಇನ್ನೂ 2 ಗೆಲುವು ಕಾಣುವ ಅಗತ್ಯವಿದೆ.

ಪಂದ್ಯಕ್ಕೆ ಮುನ್ನ ಪೂಜಾರಗೆ ಸನ್ಮಾನ

ದೆಹಲಿಯಲ್ಲಿ ಭಾರತ ಪರ ನೂರನೇ ಟೆಸ್ಟ್ ಆಡಿದ ಸಾಧನೆ ಮಾಡಲಿರುವ ಚೇತೇಶ್ವರ ಪೂಜಾರಗೆ ಪಂದ್ಯಕ್ಕೆ ಮುನ್ನ ಸನ್ಮಾನಿಸುವ ಕಾರ್ಯಕ್ರಮವನ್ನು ಬಿಸಿಸಿಐ ಹಮ್ಮಿಕೊಂಡಿದೆ. 35 ವರ್ಷದ ಪೂಜಾರಗೆ ಆತಿಥೇಯ ದೆಹಲಿ ಕ್ರಿಕೆಟ್ ಸಂಸ್ಥೆಯೂ ಸ್ಮರಣಿಕೆ ನೀಡಿ ಗೌರವಿಸಲಿದೆ. 2010ರಲ್ಲಿ ಬೆಂಗಳೂರಿನಲ್ಲಿ ಆಸೀಸ್ ವಿರುದ್ಧವೇ ಪೂಜಾರ ಭಾರತ ಪರ ಮೊದಲ ಟೆಸ್ಟ್ ಆಡಿದ್ದರು. ರಾಹುಲ್ ದ್ರಾವಿಡ್ ನಿವೃತ್ತಿ ನಂತರದಲ್ಲಿ ಭಾರತ ತಂಡದ 3ನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದ ಪೂಜಾರ, ಈಗ ಅವರು ಕೋಚ್ ಆಗಿರುವಾಗಲೇ 100ನೇ ಟೆಸ್ಟ್ ಆಡುತ್ತಿರುವುದು ವಿಶೇಷವಾಗಿದೆ. ಇದುವರೆಗೆ ಆಡಿದ 99 ಟೆಸ್ಟ್​ಗಳಲ್ಲಿ ಪೂಜಾರ 44.15ರ ಸರಾಸರಿಯಲ್ಲಿ 19 ಶತಕ ಮತ್ತು 34 ಅರ್ಧಶತಕಗಳ ಸಹಿತ 7,021 ರನ್ ಬಾರಿಸಿದ್ದಾರೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್​ನಲ್ಲಿ ಅಜೇಯ 206 ರನ್ ಗಳಿಸಿರುವುದು ಗರಿಷ್ಠವಾಗಿದೆ.

ನಾನು ಕ್ರಿಕೆಟ್ ಆಡಲು ಆರಂಭಿಸಿದಾಗ ಎಂದೂ 100 ಟೆಸ್ಟ್ ಆಡುವ ಕನಸು ಕಂಡಿರಲಿಲ್ಲ. ಬೆಂಗಳೂರಿನ ಪದಾರ್ಪಣೆ ಪಂದ್ಯದಲ್ಲಿ ಗಳಿಸಿದ 72 ರನ್​ಗಳೇ ನನ್ನ ನೆಚ್ಚಿನ ಇನಿಂಗ್ಸ್. ಟೆಸ್ಟ್ ಕ್ರಿಕೆಟ್​ನಲ್ಲಿ ಉತ್ತಮ ನಿರ್ವಹಣೆ ತೋರಲು ನನಗೆ ಯೋಗಾ ನೆರವಾಗಿದೆ. ಈಗ ನನ್ನ ಆಟವನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳಲು ಸಿದ್ಧನಿರುವೆ. ಭಾರತ ಪರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಪ್ರಶಸ್ತಿ ಗೆಲುವು ಕಾಣುವುದು ನನ್ನ ಕನಸು.

| ಚೇತೇಶ್ವರ ಪೂಜಾರ

ಭಾರತ: ಗಾಯದಿಂದಾಗಿ ಮೊದಲ ಟೆಸ್ಟ್ ತಪ್ಪಿಸಿ ಕೊಂಡಿದ್ದ ಶ್ರೇಯಸ್ ಅಯ್ಯರ್ ಈಗ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಮರಳಿ ಕಣಕ್ಕಿಳಿಯಲಿದ್ದು, ಅವರಿಗೆ ಸೂರ್ಯಕುಮಾರ್ ಸ್ಥಾನ ಬಿಟ್ಟುಕೊಡಲಿದ್ದಾರೆ. ಇನ್ನು ಉಪನಾಯಕ ಕೆಎಲ್ ರಾಹುಲ್ ಫಾಮ್ರ್ ಟೀಕೆಗೆ ಗುರಿಯಾಗಿರುವ ನಡುವೆಯೂ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಇದರಿಂದ ಯುವ ಆರಂಭಿಕ ಶುಭಮಾನ್ ಗಿಲ್ ಮತ್ತೆ ಹೊರಗುಳಿಯಬೇಕಾಗುತ್ತದೆ. ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ.

ಆಸ್ಟ್ರೇಲಿಯಾ: ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಪಂದ್ಯಕ್ಕೆ ಫಿಟ್ ಆಗಿರುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಗ್ರೀನ್ ಫಿಟ್ ಆದರೆ ಆಗ ಆಸೀಸ್ ಮೂವರು ಸ್ಪಿನ್ನರ್​ಗಳನ್ನು ಆಡಿಸಲು ಮನಸ್ಸು ಮಾಡಬಹುದು. ಇದರಿಂದ ಆಶ್ಟನ್ ಅಗರ್ ಅಥವಾ ಮ್ಯಾಟ್ ಕುಹ್ನೆಮನ್ 3ನೇ ಸ್ಪಿನ್ನರ್ ಆಗಲಿದ್ದಾರೆ. ಇದರಿಂದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಫಿಟ್ ಆಗಿದ್ದರೂ ಕೈಬಿಡಬೇಕಾದ ಇಕ್ಕಟ್ಟಿಗೂ ಸಿಲುಕಲಿದೆ. ಇಲ್ಲದಿದ್ದರೆ ಸ್ಕಾಟ್ ಬೋಲ್ಯಾಂಡ್ ಸ್ಥಾನವನ್ನು ಸ್ಟಾರ್ಕ್ ತುಂಬಲಿದ್ದಾರೆ.

36 ವರ್ಷದಿಂದ ದೆಹಲಿಯಲ್ಲಿ ಸೋತಿಲ್ಲ

ಭಾರತ ತಂಡ ಕಳೆದ 36 ವರ್ಷಗಳಿಂದ ದೆಹಲಿಯಲ್ಲಿ ಒಂದೂ ಟೆಸ್ಟ್ ಸೋಲದ ಅಜೇಯ ದಾಖಲೆಯನ್ನು ಹೊಂದಿದೆ. ಭಾರತ ತಂಡ 1987ರಲ್ಲಿ ಕೊನೆಯದಾಗಿ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ಟೆಸ್ಟ್ ಸೋತಿತ್ತು. ನಂತರದಲ್ಲಿ ಆಡಿದ 12 ಟೆಸ್ಟ್​ಗಳಲ್ಲಿ 10ರಲ್ಲಿ ಗೆದ್ದಿದ್ದು, 2ರಲ್ಲಿ ಡ್ರಾ ಸಾಧಿಸಿದೆ. ಒಟ್ಟಾರೆಯಾಗಿ ದೆಹಲಿಯಲ್ಲಿ ಆಡಿದ 34 ಟೆಸ್ಟ್​ಗಳಲ್ಲಿ 13ರಲ್ಲಿ ಗೆದ್ದಿದ್ದು, 6ರಲ್ಲಿ ಸೋತಿದೆ ಮತ್ತು 15ರಲ್ಲಿ ಡ್ರಾ ಸಾಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net