

ನವದೆಹಲಿ: ಮೈಕೆಲ್ ಕ್ಲಾರ್ಕ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದವರು. ತಮ್ಮ ರಾಷ್ಟ್ರಕ್ಕೆ ಏಕದಿನ ವಿಶ್ವಕಪ್ ಗೆದ್ದಕೊಟ್ಟವರು. ಅವರು ನಿವೃತ್ತರಾಗಿ ಸಾಕಷ್ಟು ಕಾಲ ಸಂದಿದೆ. ಇದೀಗ ಅವರು ತಾವು ಆಡುತ್ತಿದ್ದ ಅವಧಿಯಲ್ಲಿ ತಾವು ಕಂಡ ವಿಶ್ವದ ಅಗ್ರಮಾನ್ಯ 7 ಬ್ಯಾಟ್ಸ್ಮನ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಭಾರತದ ಕ್ರಿಕೆಟ್ ದಿಗ್ಗಜ ಶತಕಗಳ ಶತಕವೀರ ಸಚಿನ್ ತೆಂಡುಲ್ಕರ್ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ನ ಮಾಜಿ ನಾಯಕ ಬ್ರಿಯಾನ್ ಲಾರಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ದಿಗ್ಗಜ ಆಲ್ರೌಂಡರ್ ಜಾಕಸ್ ಕಾಲಿಸ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕರ ಕ್ರಮವಾಗಿ ನಾಲ್ಕರಿಂದ 7ನೇ ಸ್ಥಾನದಲ್ಲಿದ್ದಾರೆ.
ಮೈಕೆಲ್ ಕ್ಲಾರ್ಕ್ ಪ್ರಕಾರ ಸಚಿನ್ ತೆಂಡುಲ್ಕರ್ ಅವರ ಬ್ಯಾಟಿಂಗ್ ತಾಂತ್ರಿಕವಾಗಿ ಗಟ್ಟಿಯಾಗಿತ್ತು. ಅವರ ತಾಂತ್ರಿಕತೆಯಲ್ಲಿ ಎಳ್ಳಷ್ಟೂ ಲೋಪಗಳಿರಲಿಲ್ಲ. ಹಾಗಾಗಿ ಅವರನ್ನು ಔಟ್ ಮಾಡುವುದು ಬಲು ಕಷ್ಟದ ಕೆಲಸವಾಗಿತ್ತು ಎಂದು ಬಣ್ಣಿಸಿದ್ದಾರೆ.
ಸದ್ಯ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಯಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದರೆ ವಿರಾಟ್ ಕೊಹ್ಲಿ. ಇವರಿಗೆ ಸಚಿನ್ ತೆಂಡುಲ್ಕರ್ ಅವರಂತೆ ಮೂರಂಕಿ ಸಾಧನೆ ಮಾಡುವುದು ಎಂದರೆ ಬಲುಪ್ರೀತಿ ಎಂದು ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡುವ ಚಾಕಚಕ್ಯತೆ ಹೊಂದಿದ್ದಾರೆ. ಟಿ20 ಮಾದರಿಯಲ್ಲಿ ಇವರನ್ನು ಮೀರಿಸುವವರು ಬೇರಾರೂ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಜಾಕಸ್ ಕಾಲಿಸ್ ಅವರು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದವರು. ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕರ ಒಬ್ಬ ಜಂಟಲ್ಮನ್ ಎಂದು ಬಣ್ಣಿಸಿದ್ದಾರೆ.
ಈ ಪಟ್ಟಿಯಲ್ಲಿರುವ ಎಲ್ಲ 7 ಬ್ಯಾಟ್ಸ್ಮನ್ಗಳಿಂದ ಪ್ರೇರಿತರಾಗಿ ಮೈಕೆಲ್ ಕ್ಲಾರ್ಕ್ ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸಿಕೊಂಡಿದ್ದರು ಎಂದು ಹೇಳಬಹುದು. ಇವರು 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು.