

ಮುಂಬೈ: ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಆವೃತ್ತಿಯಲ್ಲಿ 9 ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್ ಮತ್ತು ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಬೃಹತ್ ಗೆಲುವು ದಾಖಲಿಸಿ ಪ್ಲೇಆಫ್ ಹಂತಕ್ಕೇರುವ ಕೂದಲೆಳೆಯ ಆಸೆಗೆ ಬಲ ತುಂಬಿಸಿಕೊಂಡಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಐಪಿಎಲ್-15ರಲ್ಲಿ ಗುರುವಾರ ಮುಖಾಮುಖಿ ಆಗಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎಡವಿದರೆ ಎಂಎಸ್ ಧೋನಿ ಬಳಗ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದ 2ನೇ ತಂಡ ಎನಿಸಲಿದೆ.
ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳೆನಿಸಿದ ಮುಂಬೈ-ಸಿಎಸ್‌ಕೆ, ಇದುವರೆಗೆ ಒಟ್ಟು 9 ಟ್ರೋಫಿಗಳನ್ನು ಹಂಚಿಕೊಂಡಿವೆ. 4 ಬಾರಿ ಫೈನಲ್‌ನಲ್ಲೂ ಮುಖಾಮುಖಿ ಆಗಿವೆ. ಆದರೆ ಈ ಸಲದ ಆವೃತ್ತಿ ಉಭಯ ತಂಡಗಳಿಗೂ ಲದಾಯಕವೆನಿಸಿಲ್ಲ. ಕಳೆದ ಕೆಲ ವರ್ಷಗಳಿಂದ ತಂಡದ ಪ್ರಮುಖ ಭಾಗವಾಗಿದ್ದ ಕೆಲ ಆಟಗಾರರನ್ನು ಹರಾಜಿಗೆ ಬಿಟ್ಟುಕೊಟ್ಟು, ಕೆಲ ಹೊಸ ಆಟಗಾರರನ್ನು ಸೇರಿಸಿಕೊಂಡ ಮುಂಬೈ ಇಂಡಿಯನ್ಸ್ ತಂಡದ ಲೆಕ್ಕಾಚಾರ ಸಂಪೂರ್ಣ ವೈಫಲ್ಯ ಕಂಡಿದೆ.
ತಂಡದಲ್ಲಿ ಉಳಿದ ನಾಯಕ ರೋಹಿತ್ ಶರ್ಮ, ಇಶಾನ್ ಕಿಶನ್, ಕೈರಾನ್ ಪೊಲ್ಲಾರ್ಡ್ ಅವರಂಥ ಆಟಗಾರರು ಫಾರ್ಮ್ ಕೊರತೆ ಅನುಭವಿಸಿದರೆ, ಸೂರ್ಯಕುಮಾರ್ ಯಾದವ್ ಗಾಯದ ಸಮಸ್ಯೆ ಎದುರಿಸಿದರು. ಇದರಿಂದಾಗಿ ಮುಂಬೈ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು 9ನೇ ಪಂದ್ಯದವರೆಗೆ ಕಾಯಬೇಕಾಯಿತು. ನಂತರದಲ್ಲಿ ಸತತ 2 ಜಯ ಕಂಡರೂ, ಅಷ್ಟರಲ್ಲಾಗಲೇ ಪ್ಲೇಆಫ್ ಕನಸು ಭಗ್ನಗೊಂಡಿತ್ತು. ಕಳೆದ ಪಂದ್ಯದಲ್ಲಿ ಬುಮ್ರಾ ಅಮೋಘ ದಾಳಿ ನಡೆಸಿದ ನಡುವೆಯೂ ಮುಂಬೈ, ಕೆಕೆಆರ್ ವಿರುದ್ಧ ಭಾರಿ ಅಂತರದಿಂದ ಸೋತಿತ್ತು. ಇದೀಗ ಸಿಎಸ್‌ಕೆ ವಿರುದ್ಧವೂ ಸೋತರೆ ಮುಂಬೈಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಖಚಿತಗೊಳ್ಳಲಿದೆ.
ಸಿಎಸ್‌ಕೆಗೆ ಮಾಡು-ಮಡಿ ಒತ್ತಡ
ರವೀಂದ್ರ ಜಡೇಜಾ ಸಾರಥ್ಯದ ಆರಂಭಿಕ 8 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 6 ಸೋಲು ಕಂಡಾಗ ಸಿಎಸ್‌ಕೆ ಪ್ಲೇಆಫ್ ಆಸೆ ಬಹುತೇಕ ಕೈಚೆಲ್ಲಿತ್ತು. ಆದರೆ ಧೋನಿ ಮರಳಿ ಸಾರಥ್ಯ ವಹಿಸಿಕೊಂಡ ಬಳಿಕ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಸಿಎಸ್‌ಕೆ, ಪ್ಲೇಆಫ್ ಹಂತಕ್ಕೇರಲು ‘ಔಟ್‌ಸೈಡ್ ಚಾನ್ಸ್’ ಉಳಿಸಿಕೊಂಡಿದೆ. ಇದಕ್ಕಾಗಿ ಸಿಎಸ್‌ಕೆ ತನ್ನ ಉಳಿದ 3 ಪಂದ್ಯಗಳಲ್ಲೂ ಗೆದ್ದರಷ್ಟೇ ಸಾಲದು. ಇತರ ಪಂದ್ಯಗಳ ಫಲಿತಾಂಶವೂ ಅದಕ್ಕೆ ಪೂರಕವಾಗಿ ಬರಬೇಕು. ಇನ್ನು ಸಿಎಸ್‌ಕೆಗೆ ಕೊನೇ 2 ಲೀಗ್ ಪಂದ್ಯಗಳಲ್ಲಿ ಬಲಿಷ್ಠ ಗುಜರಾತ್ (ಮೇ 15) ಮತ್ತು ರಾಜಸ್ಥಾನ (ಮೇ 20) ತಂಡಗಳ ಸವಾಲು ಎದುರಾಗಲಿದೆ.
ಟೀಮ್ ನ್ಯೂಸ್:
ಚೆನ್ನೈ ಸೂಪರ್‌ಕಿಂಗ್ಸ್: ರವೀಂದ್ರ ಜಡೇಜಾ ಗಾಯದಿಂದಾಗಿ ಸಂಪೂರ್ಣ ಐಪಿಎಲ್‌ನಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ, ಕಳೆದ ಪಂದ್ಯದಲ್ಲಿ ಅವರ ಬದಲಾಗಿ ಮರಳಿ ಅವಕಾಶ ಪಡೆದ ಶಿವಂ ದುಬೆ ತಂಡದಲ್ಲಿ ಮುಂದುವರಿಯಲಿದ್ದಾರೆ.
ಕಳೆದ ಪಂದ್ಯ: ಡೆಲ್ಲಿ ವಿರುದ್ಧ 91 ರನ್ ಗೆಲುವು.
ಮುಂಬೈ ಇಂಡಿಯನ್ಸ್: ಸತತ ವೈಫಲ್ಯ ಕಾಣುತ್ತಿರುವ ಕೈರಾನ್ ಪೊಲ್ಲಾರ್ಡ್ ಅವರನ್ನು ಕೈಬಿಡಲು ಮುಂಬೈ ಟೀಮ್ ಮ್ಯಾನೇಜ್‌ಮೆಂಟ್ ಈ ಸಲವಾದರೂ ಮನಸ್ಸು ಮಾಡುವುದೇ ಎಂಬುದನ್ನು ಕಾದುನೋಡಬೇಕು. ಪೊಲ್ಲಾರ್ಡ್ ಹೊರಬಿದ್ದರೆ ಫ್ಯಾಬಿಯನ್ ಅಲೆನ್ ಅಥವಾ ಡಿವಾಲ್ಡ್ ಬ್ರೆವಿಸ್ ಅವಕಾಶ ಪಡೆಯಲಿದ್ದಾರೆ.
ಕಳೆದ ಪಂದ್ಯ: ಕೆಕೆಆರ್ ವಿರುದ್ಧ 52 ರನ್ ಸೋಲು.
ಸಿಎಸ್‌ಕೆ ಪ್ಲೇಆಫ್ ಲೆಕ್ಕಾಚಾರ
*ಸಿಎಸ್‌ಕೆ ಉಳಿದ 3 ಪಂದ್ಯಗಳಲ್ಲೂ ದೊಡ್ಡ ಅಂತರದಿಂದ ಗೆಲ್ಲಬೇಕು.
*ಆರ್‌ಸಿಬಿ ತನ್ನ ಕೊನೇ ಎರಡೂ ಪಂದ್ಯ ಸೋಲಬೇಕು.
*ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಗೆದ್ದು, ಉಳಿದ 2ರಲ್ಲಿ 1ರಲ್ಲಾದರೂ ಸೋಲಬೇಕು.
*ಡೆಲ್ಲಿ, ಸನ್‌ರೈಸರ್ಸ್ ತಂಡಗಳು ಪಂಜಾಬ್ ವಿರುದ್ಧ ಗೆದ್ದು, ಉಳಿದ 2ರಲ್ಲಿ 1ರಲ್ಲಾದರೂ ಸೋಲಬೇಕು.
*ಆಗ ಸಿಎಸ್‌ಕೆ, ಆರ್‌ಸಿಬಿ, ಡೆಲ್ಲಿ, ಸನ್‌ರೈಸರ್ಸ್, ಪಂಜಾಬ್, ಕೆಕೆಆರ್ ತಂಡಗಳು ಗರಿಷ್ಠ 7 ಅಂಕ ಪಡೆಯಲಷ್ಟೇ ಅವಕಾಶವಿದ್ದು, ರನ್‌ರೇಟ್‌ನಲ್ಲಿ ಮುಂದಿದ್ದರೆ ಸಿಎಸ್‌ಕೆ 4ನೇ ತಂಡವಾಗಿ ಪ್ಲೇಆ್ಗೇರಲಿದೆ.
*ಈ ಲೆಕ್ಕಾಚಾರಗಳಲ್ಲಿ ಒಂದು ಸಿಎಸ್‌ಕೆಗೆ ವಿರುದ್ಧವಾಗಿ ಬಂದರೂ, ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದೆ.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 33
ಸಿಎಸ್‌ಕೆ: 14
ಮುಂಬೈ: 19
ಹಿಂದಿನ ಮುಖಾಮುಖಿ: ಸಿಎಸ್‌ಕೆಗೆ 3 ವಿಕೆಟ್ ಜಯ.