

ಮುಂಬೈ: ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿ ಬಗ್ಗೆ ಹೊಸ ಮಾಹಿತಿ ಹೊರಬೀಳುತ್ತಿದ್ದಂತೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕ್ಯಾಪ್ಟನ್ ಆಗಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೂಡ ಹೊರಬಿತ್ತು. ಈ ಮೂಲಕ ರೋಹಿತ್ ಶರ್ಮಾ ಅವರ ಬದಲಿಗೆ ಹಾರ್ದಿಕ್ ಎಂಐ ನಾಯಕತ್ವವನ್ನು ವಹಿಸಲಿದ್ದಾರೆ ಎಂದು ತಂಡ ಅಧಿಕೃತವಾಗಿ ತಿಳಿಸಿತು. ಈ ವಿಷಯ ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದರು.
ಗುಜರಾತ್ ಟೈಟನ್ಸ್ಗೆ ನಾಯಕನಾಗಿದ್ದ ಹಾರ್ದಿಕ್, ಎರಡು ಬಾರಿ ತಂಡವನ್ನು ಫೈನಲ್ಸ್ಗೆ ತಂದು, ಒಂದು ಸೀಸನ್ನ ಟ್ರೋಫಿ ಗೆದ್ದು ಕೊಟ್ಟಿದ್ದರು. ಈ ಮೂಲಕ ಯಶಸ್ವಿ ಕ್ಯಾಪ್ಟನ್ಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂಚೂಣಿಯಲಿದ್ದ ಪಾಂಡ್ಯ, ತನ್ನ ಹಳೆಯ ತಂಡ ಮುಂಬೈ ಇಂಡಿಯನ್ಸ್ಗೆ ವಾಪಾಸ್ ಆಗುವ ನಿರ್ಧಾರ ಕೈಗೊಂಡು, ದಿಢೀರ್ ಎಂಬಂತೆ ಗುಜರಾತ್ ತ್ಯಜಿಸಿ ಎಂಐ ಸೇರಿದರು. ಒಂದೆಡೆ ಈ ವಿಷಯ ಕ್ರಿಕೆಟ್ ಫ್ಯಾನ್ಸ್ಗೆ ಕೊಂಚ ಖುಷಿ ನೀಡಿದ್ದೇ ಆದ್ರೂ ಮುಂಬೈ ತಂಡಕ್ಕೆ ನಾಯಕನಾಗಿ ರೋಹಿತ್ ಅವರನ್ನು ಬದಲಿಸಿದ್ದು ತೀವ್ರ ಬೇಸರ ಮೂಡಿಸಿತು.
ಮುಂಬೈ ತಂಡಕ್ಕೆ ಕ್ಯಾಪ್ಟನ್ ಸ್ಥಾನ ಪಡೆಯಲು ದುಬಾರಿ ಮೊತ್ತದ ಪೇಮೆಂಟ್ ಮುಂದಿಟ್ಟಿದ್ದ ಪಾಂಡ್ಯ, ಅದನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ವಿಷಯ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಸೋಷಿಯಲ್ ಮೀಡಿಯಾದಲ್ಲಿ ಹಾರ್ದಿಕ್ ವಿರುದ್ಧ ಭಾರೀ ಟ್ರೋಲ್ ಮಾಡಿದ ನೆಟ್ಟಿಗರು, ಮುಂಬೈಗೆ ರೋಹಿತ್ ಕ್ಯಾಪ್ಟನ್ ಆದರೆ ಒಳ್ಳೆಯದು ಎಂದು ವ್ಯಕ್ತಪಡಿಸಿದರು.
ಕ್ರಿಕೆಟ್ ಅಭಿಮಾನಿಗಳ ತೀವ್ರ ಟೀಕೆ, ಟಿಪ್ಪಣಿಗಳ ಬೆನ್ನಲ್ಲೇ ಇದೀಗ ಎಂಐ ತಂಡದ ಮುಖ್ಯ ಕೋಚ್ ಆದ ಮಾರ್ಕ್ ಬೌಚರ್ ಪ್ರತಿಕ್ರಿಯಿಸಿದ್ದಾರೆ. ಅಸಲಿಗೆ ನೀವು ಅಂದುಕೊಂಡಂತೆ ಕ್ಯಾಪ್ಟನ್ ಸ್ಥಾನವನ್ನು ಹಾರ್ದಿಕ್ಗೆ ಕೊಟ್ಟಿಲ್ಲ. ಇದು ಸಂಪೂರ್ಣವಾಗಿ ಕ್ರಿಕೆಟ್ಗಾಗಿ ಮಾಡಲಾದ ನಿರ್ಧಾರ. ಹಾರ್ದಿಕ್ ಅನ್ನು ಉತ್ತಮ ಆಟಗಾರನಾಗಿ ಮರಳಿ ಕರೆತರಲು ನಾವು ಮುಂದಾದೆವು. ಅದೊಂದು ಪರಿವರ್ತನೆಯ ಹಂತ. ಭಾರತದಲ್ಲಿ ಬಹಳಷ್ಟು ಜನರಿಗೆ ಇದು ಅರ್ಥವಾಗುವಾಗುತ್ತಿಲ್ಲ ಎಂದರು.
"ಇದು ಕೇವಲ ಕ್ರಿಕೆಟ್ಗಾಗಿ ಮಾಡಿದ ನಿರ್ಧಾರವಾಗಿದೆ. ಈ ಮೂಲಕ ಒಬ್ಬ ಆಟಗಾರರಾಗಿ ಹಾಗೂ ಒಬ್ಬ ವ್ಯಕ್ತಿಯಾಗಿ ರೋಹಿತ್ ಅವರಲ್ಲಿ ಮತ್ತಷ್ಟು ಬೆಸ್ಟ್ ಹೊರಬರಲಿದೆ ಎಂದು ನಾನು ಭಾವಿಸುತ್ತೇನೆ. ಕ್ಯಾಪ್ಟನ್ ಜವಾಬ್ದಾರಿ ಇಲ್ಲದೇ, ಒತ್ತಡಗಳಿಂದ ದೂರ ಉಳಿದು ರೋಹಿತ್ ಆರಾಮದಾಯಕವಾಗಿ ಕ್ರೀಡಾಂಗಣದಲ್ಲಿ ಹೆಚ್ಚು ರನ್ ಗಳಿಸಬೇಕು ಹಾಗೂ ಆಟವನ್ನು ಮತ್ತಷ್ಟು ಆನಂದಿಸಬೇಕು ಎಂಬುದು ನಮ್ಮ ನಿರ್ಧಾರದ ಹಿಂದಿನ ಉದ್ದೇಶ" ಎಂದರು.
ನಾಯಕತ್ವದ ಸವಾಲುಗಳು ರೋಹಿತ್ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಒತ್ತಿ ಹೇಳಿದ ಬೌಚರ್, "ರೋಹಿತ್ ಒಬ್ಬ ಅದ್ಭುತ ವ್ಯಕ್ತಿ, ಟೀಮ್ ಇಂಡಿಯಾ ನಾಯಕನಾಗಿ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ಕ್ಯಾಪ್ಟನ್ ಸ್ಥಾನದಿಂದ ಹಿಂದೆ ಸರಿಯುವುದರಿಂದ ಅವರು ತಮ್ಮ ಆಟವನ್ನು ಇನ್ನು ಹೆಚ್ಚು ಆನಂದಿಸಲು ಅನುವು ಮಾಡಿಕೊಡುತ್ತದೆ ಎಂದು ನಾವು ನಂಬಿದ್ದೇವೆ" ಎಂದು ಹೇಳಿದರು,(ಏಜೆನ್ಸೀಸ್).