

ಶಾರ್ಜಾ: ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಲೀಗ್ ಹಂತದಲ್ಲಿಯೇ ನಿರ್ಗಮನ ಕಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡ ಎಂಎಸ್ ಧೋನಿ ಬಳಗ 10 ವಿಕೆಟ್‌ಗಳಿಂದ ಹೀನಾಯವಾಗಿ ಶರಣಾಯಿತು. ಈ ಗೆಲುವಿನೊಂದಿಗೆ ಐಪಿಎಲ್-13ರ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಎದುರು ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡ ಮುಂಬೈ ತಂಡ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿತು.
ಶುಕ್ರವಾರ ನಡೆದ ಟೂರ್ನಿಯ 41ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ ತಂಡ ವೇಗಿಗಳಾದ ಟ್ರೆಂಟ್ ಬೌಲ್ಟ್ (18ಕ್ಕೆ 4) ಮತ್ತು ಜಸ್‌ಪ್ರೀತ್ ಬುಮ್ರಾ (25ಕ್ಕೆ 2) ಮಾರಕ ದಾಳಿಗೆ ತತ್ತರಿಸಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಕೊನೆಗೆ ಸ್ಯಾಮ್ ಕರ‌್ರನ್ (52 ರನ್, 47 ಎಸೆತ, 4 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟದಿಂದ ಸಿಎಸ್‌ಕೆ 9 ವಿಕೆಟ್‌ಗೆ 114 ರನ್ ಗಳಿಸಿತು. ಪ್ರತಿಯಾಗಿ ಮುಂಬೈ ತಂಡ ಆರಂಭಿಕರಾದ ಕ್ವಿಂಟನ್ ಡಿಕಾಕ್ (46*ರನ್, 37 ಎಸೆತ, 5 ಬೌಂಡರಿ, 2 ಸಿಕ್ಸರ್) ಮತ್ತು ಇಶಾನ್ ಕಿಶನ್ (68*ರನ್, 37 ಎಸೆತ, 6 ಬೌಂಡರಿ, 5 ಸಿಕ್ಸರ್) ಜೋಡಿಯ ಅಜೇಯ ಜತೆಯಾಟದಿಂದ 12.2 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 116 ರನ್ ಗಳಿಸಿ ಸುಲಭ ಜಯ ದಾಖಲಿಸಿತು.
ಸಿಎಸ್‌ಕೆ ತಂಡ ಐಪಿಎಲ್ ಆವೃತ್ತಿಯೊಂದರಲ್ಲಿ 8 ಸೋಲು ಕಂಡಿರುವುದು ಕೂಡ ಇದೇ ಮೊದಲಾಗಿದೆ. ಕಳೆದ ಪಂದ್ಯದಲ್ಲೇ ಪ್ಲೇಆಫ್ ಆಸೆಯನ್ನು ಬಹುತೇಕ ಕೈಚೆಲ್ಲಿದ್ದ ಧೋನಿ ಪಡೆ ಇದೀಗ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.
ಸಿಎಸ್‌ಕೆ ಮಾನ ಕಾಪಾಡಿದ ಕರ‌್ರನ್
ಪವರ್‌ಪ್ಲೇ ಅವಧಿಯಲ್ಲೇ 21 ರನ್‌ಗೆ 5 ವಿಕೆಟ್ ಕಳೆದುಕೊಂಡು ನಲುಗಿದ ಸಿಎಸ್‌ಕೆ ತಂಡ, ಸ್ಯಾಮ್ ಕರ‌್ರನ್ ಹೋರಾಟದಿಂದ ನಿಕೃಷ್ಟ ಮೊತ್ತಕ್ಕೆ ಕುಸಿಯುವುದರಿಂದ ಪಾರಾಯಿತು. ಶಾರ್ದೂಲ್ ಠಾಕೂರ್ (11) ಮತ್ತು ಇಮ್ರಾನ್ ತಾಹಿರ್ (13*) ಬೆಂಬಲದಿಂದ ಕರ‌್ರನ್ ತಂಡವನ್ನು 110ರ ಗಡಿ ದಾಟಿಸಿ ಇನಿಂಗ್ಸ್‌ನ ಕೊನೇ ಎಸೆತದಲ್ಲಿ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಶಾರ್ದೂಲ್ ಜತೆ 8ನೇ ವಿಕೆಟ್‌ಗೆ 28 ಮತ್ತು ತಾಹಿರ್ ಜತೆಗೆ 9ನೇ ವಿಕೆಟ್‌ಗೆ 43 ರನ್ ಪೇರಿಸಿದ ಕರ‌್ರನ್ ಕೊನೇ ಓವರ್‌ನಲ್ಲಿ ಅರ್ಧಶತಕವನ್ನೂ ಪೂರೈಸಿದರು.
ಆರಂಭದಲ್ಲೇ ಆಘಾತ ನೀಡಿದ ಮುಂಬೈ
ಸಿಎಸ್‌ಕೆ ತಂಡದ ಇನಿಂಗ್ಸ್‌ನ ಆರಂಭವೇ ಶೋಚನೀಯವಾಗಿತ್ತು. ಹೊಸ ಆರಂಭಿಕ ಋತುರಾಜ್ ಗಾಯಕ್ವಾಡ್ (0) ಮೊದಲ ಓವರ್‌ನಲ್ಲೇ ಖಾತೆ ತೆರೆಯದೆ ಬೌಲ್ಟ್ ಬಲೆಗೆ ಬಿದ್ದರೆ, 2ನೇ ಓವರ್‌ನಲ್ಲಿ ಬುಮ್ರಾ, ಅಂಬಟಿ ರಾಯುಡು (2) ಮತ್ತು ಎನ್. ಜಗದೀಶನ್ (0) ವಿಕೆಟ್‌ಗಳನ್ನು ಸತತ 2 ಎಸೆತಗಳಲ್ಲಿ ಕಬಳಿಸಿದರು. ಮರುಓವರ್‌ನಲ್ಲಿ ಮತ್ತೆ ಫಾಫ್ ಡು ಪ್ಲೆಸಿಸ್ (1) ವಿಕೆಟ್ ಕೂಡ ಕಬಳಿಸಿದ ಬೌಲ್ಟ್, ಸಿಎಸ್‌ಕೆ ತಂಡ ಕೇವಲ 3 ರನ್‌ಗೆ 4 ವಿಕೆಟ್ ಕಳೆದುಕೊಂಡು ತತ್ತರಿಸುವಂತೆ ಮಾಡಿದರು. ಬಳಿಕ ಬೌಲ್ಟ್ ಪವರ್‌ಪ್ಲೇಯ ಕೊನೇ ಓವರ್‌ನಲ್ಲಿ ರವೀಂದ್ರ ಜಡೇಜಾ (7) ವಿಕೆಟ್ ಕೂಡ ಕಬಳಿಸಿದರು. ನಾಯಕ ಧೋನಿ (16) ಕೂಡ ಮತ್ತೊಮ್ಮೆ ವೈಲ್ಯ ಕಂಡರು.
ರೋಹಿತ್‌ಗೆ ಗಾಯ, ಪೊಲ್ಲಾರ್ಡ್ ನಾಯಕ
ಸ್ನಾಯುಸೆಳೆತದ ಸಮಸ್ಯೆಯಿಂದಾಗಿ ನಾಯಕ ರೋಹಿತ್ ಶರ್ಮ ಪಂದ್ಯದಿಂದ ಹೊರಗುಳಿದರೆ, ಕೈರಾನ್ ಪೊಲ್ಲಾರ್ಡ್ ಮುಂಬೈ ತಂಡವನ್ನು ಮುನ್ನಡೆಸಿದರು. ತಂಡದಲ್ಲಿ ರೋಹಿತ್ ಸ್ಥಾನವನ್ನು ಸೌರಭ್ ತಿವಾರಿ ತುಂಬಿದರು. 3 ಬದಲಾವಣೆ ಕಂಡ ಸಿಎಸ್‌ಕೆ ತಂಡದಲ್ಲಿ ವ್ಯಾಟ್ಸನ್, ಪೀಯುಷ್ ಚಾವ್ಲಾ, ಕೇದಾರ್ ಜಾಧವ್ ಬದಲಿಗೆ ಇಮ್ರಾನ್ ತಾಹಿರ್, ಋತುರಾಜ್ ಗಾಯಕ್ವಾಡ್, ಎನ್. ಜಗದೀಶನ್ ಸ್ಥಾನ ಪಡೆದರು.