ಪ್ರಧಾನಿ ಮೋದಿ ಭೇಟಿಯಾಗಲಿರುವ ಮೆಸ್ಸಿ: ಭಾರತ ಭೇಟಿಯ ವೇಳಾಪಟ್ಟಿ ಬಹಿರಂಗ

New Project (2)
Published on

ನವದೆಹಲಿ: ಅರ್ಜೆಂಟೀನಾದ ಫುಟ್​ಬಾಲ್​ ತಾರೆ ಲಿಯೋನೆಲ್​ ಮೆಸ್ಸಿ ಅವರ ಡಿಸೆಂಬರ್​ ತಿಂಗಳ ಭಾರತ ಭೇಟಿಯ ವೇಳಾಪಟ್ಟಿ ಬಹಿರಂಗಗೊಂಡಿದ್ದು, ಕೋಲ್ಕತ, ಮುಂಬೈ, ನವದೆಹಲಿ ಮಾತ್ರವಲ್ಲದೆ ಅಹಮದಾಬಾದ್​ನಲ್ಲೂ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್​ 15ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ.

ಡಿಸೆಂಬರ್​ 12ರ ರಾತ್ರಿ ಕೋಲ್ಕತಕ್ಕೆ ಆಗಮಿಸಲಿರುವ ಮೆಸ್ಸಿ ಮರುದಿನ ಲೇಕ್​ಟೌನ್​ ಶ್ರೀಭೂಮಿಯಲ್ಲಿ ತನ್ನ 70 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ಈಡನ್​ ಗಾರ್ಡನ್ಸ್​ನಲ್ಲಿ ಕೋಲ್ಕತದ ಕ್ರೀಡಾ ತಾರೆಯರಾದ ಸೌರವ್​ ಗಂಗೂಲಿ, ಲಿಯಾಂಡರ್​ ಪೇಸ್​, ಬೈಚುಂಗ್​ ಭುಟಿಯಾ, ನಟ ಜಾನ್​ ಅಬ್ರಾಹಂ ಜತೆ ಸಾಫ್ಟ್​ಬಾಲ್​ ಪಂದ್ಯ ಆಡಲಿದ್ದಾರೆ. ಮೆಸ್ಸಿಯ ಎಲ್ಲ ಕಾರ್ಯಕ್ರಮಗಳಿಗೆ ಟಿಕೆಟ್​ ಇರಲಿದ್ದು, ಕನಿಷ್ಠ ದರ 3,500 ರೂ. ನಿಗದಿಯಾಗಿದೆ.

ಮುಂಬೈ ಭೇಟಿಯ ವೇಳೆ ಮೆಸ್ಸಿ ಕ್ರಿಕೆಟ್​ ತಾರೆಯರಾದ ಎಂಎಸ್​ ಧೋನಿ, ವಿರಾಟ್​ ಕೊಹ್ಲಿ ಜತೆಗೆ ಕ್ರಿಕೆಟ್​ ಆಡಲಿದ್ದಾರೆ ಎಂಬ ವರದಿಯನ್ನು ಸಂಟಕರು ತಳ್ಳಿಹಾಕಿದ್ದಾರೆ. ಅಲ್ಲದೆ ಮೆಸ್ಸಿ ಈ ಪ್ರವಾಸದ ವೇಳೆ ಕೇರಳಕ್ಕೂ ಭೇಟಿ ನೀಡುವುದಿಲ್ಲ ಎಂದಿದ್ದಾರೆ. ಮೆಸ್ಸಿ 14 ವರ್ಷಗಳ ಬಳಿಕ ಭಾರತಕ್ಕೆ ಅಗಮಿಸಲಿದ್ದಾರೆ. 2011ರಲ್ಲಿ ಮೊದಲ ಬಾರಿ ಕೋಲ್ಕತದಲ್ಲಿ ಸೌಹಾರ್ದ ಫುಟ್​ಬಾಲ್​ ಪಂದ್ಯ ಆಡಿದ್ದರು.

ಮೆಸ್ಸಿ ಭಾರತ ಭೇಟಿಯ ವೇಳಾಪಟ್ಟಿ:

ಡಿಸೆಂಬರ್​ 12: ರಾತ್ರಿ 10 ಗಂಟೆಗೆ ಕೋಲ್ಕತಕ್ಕೆ ಆಗಮನ.

ಡಿಸೆಂಬರ್​ 13: ಕೋಲ್ಕತದಲ್ಲಿ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದಲ್ಲಿ ಭಾಗಿ; ಲೇಕ್​ಟೌನ್​ ಶ್ರೀಭೂಮಿಯಲ್ಲಿ ತನ್ನ 70 ಅಡಿ ಎತ್ತರದ ಪ್ರತಿಮೆ ಅನಾವರಣ; ಮಧ್ಯಾಹ್ನ 12ರಿಂದ 1.30ರವರೆಗೆ ಈಡನ್​ ಗಾರ್ಡನ್ಸ್​ನಲ್ಲಿ ಗೋಟ್​ ಕನ್ಸರ್ಟ್​, ಗೋಟ್​ ಕಪ್​ನಲ್ಲಿ ಭಾಗಿ; ಸಂಜೆ ಅಹಮದಾಬಾದ್​ಗೆ ಪ್ರಯಾಣ: ಅದಾನಿ ಪೌಂಡೇಷನ್​ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ.

ಡಿಸೆಂಬರ್​ 14: ಮುಂಬೈನಲ್ಲಿ ಮಧ್ಯಾಹ್ನ 3.45ಕ್ಕೆ ಸಿಸಿಐ ಕಾರ್ಯಕ್ರಮದಲ್ಲಿ ಭಾಗಿ; ಸಂಜೆ 5.30ಕ್ಕೆ ವಾಂಖೆಡೆ ಸ್ಟೇಡಿಯಂನಲ್ಲಿ ಗೋಟ್​ ಕನ್ಸರ್ಟ್​.

ಡಿಸೆಂಬರ್​ 15: ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಧ್ಯಾಹ್ನ 2.15ಕ್ಕೆ ಫಿರೋಜ್​ ಷಾ ಕೋಟ್ಲದಲ್ಲಿ ಗೋಟ್​ ಕನ್ಸರ್ಟ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net