ಐಪಿಎಲ್ ಅವಳಿ ಸೂಪರ್ ಓವರ್‌ಗಿಂತ ಕುತೂಹಲ ಕೆರಳಿಸಿದ್ದಳು ಇವಳು!

mistry girl web
Published on

ದುಬೈ: ಐಪಿಎಲ್ 13ನೇ ಆವೃತ್ತಿಯಲ್ಲಿ ಕಳೆದ ಭಾನುವಾರ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ಅವಳಿ ಸೂಪರ್ ಓವರ್‌ಗಳನ್ನು ಕಂಡು ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಂತಿತ್ತು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಇದಕ್ಕಿಂತ ಕುತೂಹಲ ಕೆರಳಿಸಿದ್ದು, ‘ಯಾರು ಆ ಹುಡುಗಿ?’ ಎಂಬ ಪ್ರಶ್ನೆ. ಪಂದ್ಯದ ವೇಳೆ ಫ್ರಾಂಚೈಸಿ ಮಾಲೀಕರ ಕಡೆಯ ಕೆಲವೇ ಕೆಲವು ಪ್ರೇಕ್ಷಕರ ಸಾಲಿನಲ್ಲಿದ್ದ ಆ ಹುಡುಗಿ ಯಾರು ಎಂಬ ಕುತೂಹಲ ನೆಟ್ಟಿಗರನ್ನು, ಪಂದ್ಯದ ಫಲಿತಾಂಶಕ್ಕಿಂತಲೂ ಹೆಚ್ಚು ಕಾಡಿತ್ತು.

ಅವಳಿ ಸೂಪರ್ ಓವರ್ ಬಳಿಕ ಕೊನೆಗೂ ಪಂದ್ಯದಲ್ಲಿ ಫಲಿತಾಂಶ ಹೊರಬಂದಂತೆ, ‘ಯಾರು ಆ ಹುಡುಗಿ’ ಎಂಬ ಪ್ರಶ್ನೆಗೂ ನೆಟ್ಟಿಗರು ಉತ್ತರ ಕಂಡುಕೊಂಡಿದ್ದಾರೆ. ಅವಳೇ, ರಿಯಾನಾ ಲಾಲ್ವಾನಿ. ಐಪಿಎಲ್ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಹೊಸ ‘ಮಿಸ್ಟ್ರಿ ಗರ್ಲ್’ ಆಗಿ ಈಕೆ ಗುರುತಿಸಲ್ಪಟ್ಟಿದ್ದಾಳೆ.

ಸೂಪರ್ ಓವರ್ ನಡುವೆ ಕ್ಯಾಮರಾಮನ್ ಈಕೆಯತ್ತ ಕ್ಯಾಮರಾ ತಿರುಗಿಸಿದ್ದೇ ತಿರುಗಿಸಿದ್ದು, ಈಕೆ ಈಗ ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಹಿಂಬಾಲಕರನ್ನು ಪಡೆದುಕೊಂಡಿದ್ದಾಳೆ. ಯಾರು ಈ ಹುಡುಗಿ ಎಂಬ ಪ್ರಶ್ನೆಯ ಬೆನ್ನುಹತ್ತಿ ಹೋದ ನೆಟ್ಟಿಗರು, ಈಕೆಯ ಪರಿಚಯವನ್ನು ಹುಡುಕಿ ತೆಗೆದಿದ್ದಾರೆ. ಕ್ರಿಕೆಟ್ ಪ್ರೇಮಿಗಳ ಹೃದಯ ಕದ್ದ ಆಕೆ ಸಾಕಷ್ಟು ಮೀಮ್ಸ್‌ಗಳಿಗೂ ಆಹಾರವಾಗಿದ್ದಾಳೆ.

ಪಂದ್ಯದ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾೃಂಡ್‌ನಲ್ಲಿದ್ದ ಈಕೆ ಈಗ ‘ಸೂಪರ್ ಓವರ್ ಗರ್ಲ್’ ಎಂದೂ ತನ್ನ ಗುರುತನ್ನು ಬದಲಾಯಿಸಿಕೊಂಡಿದ್ದಾಳೆ. ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ದೊಡ್ಡ ಅಭಿಮಾನಿಯಾಗಿರುವ ಈಕೆ ದುಬೈನಲ್ಲಿ ಅವಳಿ ಸೂಪರ್ ಓವರ್ ಪಂದ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಳು. 23 ವರ್ಷದ ಈಕೆ ಇಂಗ್ಲೆಂಡ್‌ನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದಾಳೆ ಎಂದೂ ನೆಟ್ಟಿಗರು ಮಾಹಿತಿ ಕಲೆಹಾಕಿದ್ದಾರೆ. ಆದರೆ ಈಕೆಗೂ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕರ ನಡುವಿನ ಕನೆಕ್ಷನ್ ಏನು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.

ಅಂದಹಾಗೆ, ಐಪಿಎಲ್ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಹುಡುಗಿಯರು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆರ್‌ಸಿಬಿ ತಂಡದ ಪಂದ್ಯದ ವೇಳೆ ಬೆಂಗಳೂರು ಹುಡುಗಿಯೊಬ್ಬಳು ಕೂಡ ಇದೇ ರೀತಿ ನೆಟ್ಟಿಗರ ಗಮನ ಸೆಳೆದಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net