ಎಷ್ಟು ಚೆಂದ ಇದ್ದಾರೆ ನೋಡಿ ಧೋನಿ ಸಹೋದರಿ! ಇವರೇನು ಕೆಲಸ ಮಾಡ್ತಿದ್ದಾರೆ ಗೊತ್ತಾ? ಇಲ್ಲಿದೆ ಮಾಹಿತಿ

WhatsApp Image 2024-04-08 at 1.52.17 PM
Published on

ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಶ್ರೇಷ್ಠ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ಇಂದಿನ ಯುವಜನತೆಯ ಅಚ್ಚುಮೆಚ್ಚಿನ ಕ್ರಿಕೆಟಿಗ ಹಾಗೂ ಅದ್ಬುತ ವ್ಯಕ್ತಿತ್ವವುಳ್ಳ ವ್ಯಕ್ತಿ. ಪ್ರೀತಿಯಿಂದ ಮಾಹಿ ಎಂದೇ ಕರೆಯಲ್ಪಡುವ ಧೋನಿಗೆ ದೇಶ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳ ಬಳಗವಿದೆ.

2004ರಿಂದ ಇಂದಿನವರೆಗೆ ಕೋಟ್ಯಾಂತರ ಫ್ಯಾನ್ಸ್​ಗಳಿಂದ ಆರಾಧಿಸಲ್ಪಡುವ ಧೋನಿ ಸಾಧನೆ ಅಪಾರ. 2007ರಲ್ಲಿ ಐಸಿಸಿ ವಿಶ್ವ ಟಿ-20 ಟ್ರೋಫಿ, 2011ರ ಕ್ರಿಕೆಟ್ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2010 ಮತ್ತು 2016ರಲ್ಲಿ ಏಷ್ಯಾ ಕಪ್ ಪ್ರಶಸ್ತಿಗಳನ್ನು ಭಾರತಕ್ಕೆ ತಂದುಕೊಟ್ಟಿರುವ ಕೀರ್ತಿ ಧೋನಿ ಅವರಿಗಿದೆ. ಪ್ರಸ್ತುತ ಐಪಿಎಲ್ 2024ರ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಆಡುತ್ತಿರುವ ಕ್ಯಾಪ್ಟನ್ ಕೂಲ್,​ ತಮ್ಮ 42ನೇ ವಯಸ್ಸಿನಲ್ಲಿಯೂ ಚಿರ ಯುವಕನಂತೆ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಿಗೆ ಅತೀವ ಸಂತಸ ತಂದಿದೆ.

ಭಾರತೀಯ ಕ್ರಿಕೆಟ್‌ಗೆ ಬರುವ ಮುನ್ನ ಎಂ.ಎಸ್. ಧೋನಿಗೆ ಸಹಾಯ ಮಾಡಿದ ಬಾಲ್ಯ ಸ್ನೇಹಿತರು, ಅವರ ಮೊದಲ ಪ್ರೇಯಸಿ ಪ್ರಿಯಾಂಕ ಹಾಗೂ ಪತ್ನಿ ಸಾಕ್ಷಿ ಎಲ್ಲರ ಬಗ್ಗೆ ನಮಗೆ ಮಾಹಿತಿ ಇದೆ. ಧೋನಿಯ ಇಡೀ ಜೀವನವನ್ನು ನಾವು ಅವರ ಬಯೋಪಿಕ್ ಸಿನಿಮಾ 'ಧೋನಿ ದಿ ಅನ್​ಟೋಲ್ಡ್​ ಸ್ಟೋರಿ'ಯಲ್ಲಿ ನೋಡಿ ತಿಳಿದುಕೊಂಡಿದ್ದೇವೆ. ಆದರೆ, ಕ್ಯಾಪ್ಟನ್ ಕೂಲ್ ಕ್ರಿಕೆಟ್ ಜೀವನಕ್ಕೆ ಸಾಥ್ ಕೊಟ್ಟ ಅವರ ಸಹೋದರಿ ಹೇಗಿದ್ದಾರೆ? ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಧೋನಿ ಅವರ ಹಿರಿಯ ಸಹೋದರಿ ಜಯಂತಿ ಗುಪ್ತಾ ವಹಿಸಿದ ಪಾತ್ರದ ಬಗ್ಗೆ ಅನೇಕರಿಗೆ ಇಂದಿಗೂ ತಿಳಿದಿಲ್ಲ. ಮಧ್ಯಮ ವರ್ಗದ ಕುಟುಂಬವಾದ ಕಾರಣ ಧೋನಿಗೆ ದೊಡ್ಡ ಕನಸು ಕಾಣಲು ಎಂದಿಗೂ ಅವಕಾಶವೇ ಇರಲಿಲ್ಲ. ಆದರೆ, ಇದೆಲ್ಲವನ್ನೂ ಮೀರಿ ಆ ಕನಸು ಕಾಣುವಂತೆ, ಈಡೇರುವಂತೆ ಮಾಡಿದ್ದು, ಸಹೋದರಿ ಜಯಂತಿ. ಪಾನ್ ಸಿಂಗ್ ಧೋನಿ ಮತ್ತು ದೇವಕಿ ದೇವಿ ಅವರ ಹಿರಿಯ ಪುತ್ರಿಯಾದ ಇವರು, ತಮ್ಮನ ಯಶಸ್ಸಿಗೆ ಪ್ರಮುಖ ಕಾರಣರಾದರು.

ಕ್ರಿಕೆಟ್ ಬಗ್ಗೆ ಮಾಹಿ ಆಸಕ್ತಿ ತೋರಿದಾಗ, ಆ ಕನಸುಗಳನ್ನು ಬೆನ್ನಟ್ಟಲು ಬೆಂಬಿಡದೆ ಪ್ರೋತ್ಸಾಹಿಸಿದವರು ಜಯಂತಿ ಗುಪ್ತಾ. ಧೋನಿ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ತಮ್ಮ ತಂದೆಗೆ ಮನವರಿಕೆ ಮಾಡಿ, ಅವರಿಂದ ಗ್ರೀನ್ ಸಿಗ್ನಲ್ ಪಡೆದು, ಧೋನಿಯ ಪ್ರತಿ ಹೆಜ್ಜೆಗು ಸಾಥ್ ನೀಡಿದರು. ಜಯಂತಿ ಗುಪ್ತಾ ಅವರ ನಿಖರವಾದ ವಯಸ್ಸಿನ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಮಾಹಿಗಿಂತ 3ರಿಂದ 4 ವರ್ಷ ಹಿರಿಯರು ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಜಯಂತಿ ಅವರು ರಾಂಚಿಯ ಸಾರ್ವಜನಿಕ ಶಾಲೆಯಲ್ಲಿ ಇಂಗ್ಲಿಷ್ ಟೀಚರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಂಚಿಯಲ್ಲಿ ನೆಲೆಸಿರುವ ಧೋನಿಯ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಗೌತಮ್ ಗುಪ್ತಾ ಅವರನ್ನು ಜಯಂತಿ ವಿವಾಹವಾಗಿದ್ದಾರೆ. ಪತಿ, ಧೋನಿಯ ವೃತ್ತಿಜೀವನದ ಆರಂಭದಲ್ಲಿ ರಾಜ್ಯ ಮತ್ತು ಜಿಲ್ಲೆಯ ಆಟಗಾರರಾಗಿದ್ದ ದಿನಗಳಲ್ಲಿ ಅವರಿಗೆ ಹೆಚ್ಚು ಸಹಾಯ ಮಾಡಿದವರು ಎಂದು ತಿಳಿದುಬಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net