

ನವದೆಹಲಿ: ಪತಿ ಹಾಗೂ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ವೈಫಲ್ಯ ಕಂಡಾಗಲೆಲ್ಲಾ ಟ್ರೋಲ್ಗೆ ಸಿಲುಕುವ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್, ಮತ್ತೊಮ್ಮೆ ಅಂಥ ಟೀಕೆಯನ್ನು ದಿಟ್ಟವಾಗಿ ಎದುರಿಸಿ ಗಮನ ಸೆಳೆದಿದ್ದಾರೆ.
ಭಾರತ-ಕಿವೀಸ್ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಕ್ಲಿಕ್ಕಿಸಿಕೊಂಡ ಚಿತ್ರವನ್ನು ಮಯಾಂತಿ ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ಪ್ರಕಟಿಸಿದ್ದರು. ಇದಕ್ಕೆ ಕಾಮೆಂಟ್ ಹಾಕಿದ್ದ ವ್ಯಕ್ತಿಯೊಬ್ಬ, ‘ಸ್ಟುವರ್ಟ್ ಬಿನ್ನಿ ಈಗೆಲ್ಲಿದ್ದಾರೆ?’ ಎಂದು ಪ್ರಶ್ನಿಸಿದ್ದರೆ, ‘ಈಕೆಯ ಲಗೇಜ್ ತೆಗೆದುಕೊಂಡು ಹೋಗಲು ನೆರವಾಗುತ್ತಿದ್ದಾರೆ’ ಎಂದು ಮತ್ತೋರ್ವ ಕಾಲೆಳೆದಿದ್ದರು.
ಇದಕ್ಕೆ ದಿಟ್ಟ ತಿರುಗೇಟು ಕೊಟ್ಟ ಮಯಾಂತಿ, ‘ನನ್ನ ಲಗೇಜು ನಾನೇ ತೆಗೆದುಕೊಂಡು ಹೋಗಬಲ್ಲೆ. ಬಿನ್ನಿ ಕ್ರಿಕೆಟ್ ಆಡುತ್ತ ಅವರದೇ ಜೀವನದಲ್ಲಿ ಬಿಜಿಯಾಗಿದ್ದಾರೆ. ತಮಗೆ ಪರಿಚಯ ಇಲ್ಲದವರ ಬಗ್ಗೆ ಕಾಮೆಂಟ್ ಮಾಡುತ್ತ ಕಾಲ ಕಳೆಯುತ್ತಿಲ್ಲ’ ಎಂದುತ್ತರಿಸಿದ್ದಾರೆ.