

ಗ್ವಾಲಿಯರ್: ವೇಗಿ ಅರ್ಷದೀಪ್ ಸಿಂಗ್ (14ಕ್ಕೆ 3) ಹಾಗೂ ಮೂರು ವರ್ಷಗಳ ನಂತರ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (31ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಿರ್ವಹಣೆಯ ಬಲದಿಂದ ಯುವ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 7 ವಿಕೆಟ್‌ಗಳಿಂದ ಗೆದ್ದು, ಶುಭಾರಂಭ ಕಂಡಿದೆ. ಇದರೊಂದಿಗೆ ಸೂರ್ಯಕುಮಾರ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ನೂತನ ಶ್ರೀಮಂತ್ ಮಾಧವ್‌ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ (35*ರನ್, 32 ಎಸೆತ,3 ಬೌಂಡರಿ) ಆಸರೆಯಲ್ಲಿ 19.5 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಹಾರ್ದಿಕ್ ಪಾಂಡ್ಯ (39*ರನ್, 16 ಎಸೆತ, 5 ಬೌಂಡರಿ,2 ಸಿಕ್ಸರ್) ಬಿರುಸಿನಾಟದ ಬಲದಿಂದ ಟೀಮ್ ಇಂಡಿಯಾ 11.5 ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌ಗಳಿಸಿ ಇನ್ನೂ 49 ಎಸೆತ ಇರುವಂತೆಯೇ ಗೆಲುವಿನ ಸಂಭ್ರಮ ಕಂಡಿತು.
ಮಯಾಂಕ್ ‘ಮೇಡನ್’ ಪದಾರ್ಪಣೆ: ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಸಾಮರ್ಥ್ಯ ಹೊಂದಿರುವ 22 ವರ್ಷದ ಮಯಾಂಕ್ ಯಾದವ್ ರಾಷ್ಟ್ರೀಯ ತಂಡದ ಪರ ಯಶಸ್ವಿ ಪದಾರ್ಪಣೆ ಮಾಡಿದರು. ಬಾಂಗ್ಲಾ ಇನಿಂಗ್ಸ್ 6ನೇ ಓವರ್‌ನಲ್ಲಿ ದಾಳಿಗಿಳಿದ ಮಯಾಂಕ್ ಮೊದಲ ಓವರ್‌ನಲ್ಲಿ ಒಂದೂ ರನ್ ನೀಡದೆ ಮೇಡನ್ ಮಾಡಿದರು. ನಂತರ ತನ್ನ 2ನೇ ಓವರ್‌ನಲ್ಲಿ ಎಸೆದ 146.1 ವೇಗದ 2ನೇ ಎಸೆತದಲ್ಲಿ ಅನುಭವಿ ಮುಹಮುದುಲ್ಲಾ ಮಿಡ್ ವಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಕ್ಯಾಚಿತ್ತರು. ಇದರೊಂದಿಗೆ ಐಪಿಎಲ್ ಬಳಿಕ ಮಯಾಂಕ್ ಭಾರತ ಪರ ಚೊಚ್ಚಲ ಪಂದ್ಯದಲ್ಲಿ ಗಮನಸೆಳೆದರು.
3. ಮಯಾಂಕ್ ಯಾದವ್ ಪದಾರ್ಪಣೆಯ ಟಿ20ಯಲ್ಲಿ ಮೇಡನ್ ಓವರ್ ಎಸೆದ 3ನೇ ಭಾರತೀಯ ವೇಗಿ. ಅಜಿತ್ ಅಗರ್ಕರ್ (2006), ಅರ್ಷದೀಪ್ ಸಿಂಗ್ (2022) ಮೊದಲಿಬ್ಬರು.