

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನವೆಂಬರ್ 14ರಿಂದ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೆ ಆರ್. ಸ್ಮರಣ್ ಸಾರಥ್ಯದ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಎರಡು ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ತಂಡದಿಂದ ಕೈಬಿಟ್ಟು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿರುವ ಕಾರಣ ದೇವದತ್ ಪಡಿಕ್ಕಲ್ ಮತ್ತು ಪ್ರಸಿದ್ಧಕೃಷ್ಣ ಟೂರ್ನಿಗೆ ಅಲಭ್ಯರಾಗಿದ್ದಾರೆ.
37 ವರ್ಷದ ಮನೀಷ್ ಪಾಂಡೆ 2024ರ ಡಿಸೆಂಬರ್ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ 2 ವರ್ಷಗಳ ಅವಧಿಯಲ್ಲಿ ಅವರು ಐಪಿಎಲ್ನಲ್ಲಿ ಕೆಕೆಆರ್ ಪರ 9 ಪಂದ್ಯ ಮತ್ತು ಮಹಾರಾಜ ಟ್ರೋಫಿಯಲ್ಲಿ ಮಾತ್ರ ಪಂದ್ಯಗಳನ್ನು ಆಡಿದ್ದರು.
"ಕಳೆದ ಆವೃತ್ತಿಯಲ್ಲಿ ಕರ್ನಾಟಕ ನಾಕೌಟ್ ಹಂತಕ್ಕೇರಲು ವಿಲವಾಗಿತ್ತು. ನಾವು 2 ಪಂದ್ಯವನ್ನಷ್ಟೇ ಗೆದ್ದಿದ್ದೆವು. ಆಗ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಅನುಭವದ ಬಲ ಅಗತ್ಯವಿರುವಂತೆ ಕಂಡಿತು. ಹೀಗಾಗಿ ಈ ಸ್ಥಾನಕ್ಕೆ ಮನೀಷ್ ಪಾಂಡೆ ಸೂಕ್ತ ಎಂದು ಭಾವಿಸಿದ್ದೇವೆ' ಎಂದು ರಾಜ್ಯ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಅಮಿತ್ ವರ್ಮ ತಿಳಿಸಿದ್ದಾರೆ. ಮನೀಷ್ ಪಾಂಡೆ ಈ ಹಿಂದೆ 2018-19, 2019-20ರ ಸಾಲಿನಲ್ಲಿ ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಾಗ ರಾಜ್ಯ ತಂಡದ ನಾಯಕರಾಗಿದ್ದರು. 2021-22ರಲ್ಲಿ ರನ್ನರ್ಅಪ್ ಆಗಿದ್ದ ತಂಡದಲ್ಲೂ ಇದ್ದರು. ಮನೀಷ್ ಅತ್ಯಂತ ಫಿಟ್ ಆಗಿರುವುದರಿಂದ ಅವರು ಇತ್ತೀಚೆಗೆ ಹೆಚ್ಚಿನ ಪಂದ್ಯ ಆಡದಿರುವುದು ಹಿನ್ನಡೆಯಲ್ಲ ಎಂದು ಅಮಿತ್ ವರ್ಮ ಸ್ಪಷ್ಟಪಡಿಸಿದ್ದಾರೆ.
ಟೂರ್ನಿಯ ಎಲೀಟ್ ಎ ಗುಂಪಿನಲ್ಲಿರುವ ರಾಜ್ಯ ತಂಡ ತನ್ನ ಲೀಗ್ ಪಂದ್ಯಗಳನ್ನು ಮುಂಬೈನಲ್ಲಿ ಆಡಲಿದೆ. ನ.14ರ ಮೊದಲ ಪಂದ್ಯದಲ್ಲಿ ಬಂಗಾಳವನ್ನು ಎದುರಿಸಲಿದೆ. ಬಳಿಕ ಉತ್ತರ ಪ್ರದೇಶ (ನ.16), ಮಿಜೋರಾಂ (ನ.18), ಜಾರ್ಖಂಡ್ (ನ.20), ಚಂಡೀಗಢ (ನ.22), ರಾಜಸ್ಥಾನ (ನ.24), ಬರೋಡ (ನ.26) ತಂಡಗಳನ್ನು ಎದುರಿಸಲಿದೆ.
ಮಯಾಂಕ್, ಶ್ರೇಯಸ್ ಔಟ್
ರಣಜಿ ಟ್ರೋಫಿಯಲ್ಲಿ ರನ್ಬರ ಎದುರಿಸಿದ್ದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಇತ್ತೀಚೆಗೆ ರಣಜಿಯಲ್ಲಿ ಹಂಗಾಮಿ ನಾಯಕರಾಗಿದ್ದ ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ರಾಜ್ಯ ಟಿ20 ತಂಡದಿಂದ ಕೈಬಿಡಲಾಗಿದೆ. ಈ ಮೂಲಕ ಯುವ ಮತ್ತು ಟಿ20 ತಜ್ಞ ಆಟಗಾರರಿಗೆ ತಂಡದಲ್ಲಿ ಹೆಚ್ಚಿನ ಮಣೆ ಹಾಕಲಾಗಿದೆ. ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ ಅವರನ್ನೂ ಕಡೆಗಣಿಸಲಾಗಿದೆ. ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ಆಲ್ರೌಂಡ್ ನಿರ್ವಹಣೆಯೊಂದಿಗೆ ಮಿಂಚಿದ ಮನ್ವಂತ್ ಕುಮಾರ್, ರಿತೇಶ್ ಭಟ್ಕಳ್, ಬ್ಯಾಟರ್ಗಳಾದ ರೋಹನ್ ಪಾಟೀಲ್, ಅನೀಶ್ವರ್ ಗೌತಮ್ ಮತ್ತು ಸ್ಪಿನ್ನರ್ ಶಿಖರ್ ಶೆಟ್ಟಿಗೆ ಟಿ20 ತಂಡದಲ್ಲೂ ಸ್ಥಾನ ಕಲ್ಪಿಸಲಾಗಿದೆ. ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ವಿಕೆಟ್ ಕೀಪರ್&ಬ್ಯಾಟರ್ ಲವನೀತ್ ಸಿಸೋಡಿಯಾ ಕೂಡ ಸ್ಥಾನ ಪಡೆದಿದ್ದಾರೆ. ಅನುಭವಿ ಕರುಣ್ ನಾಯರ್, ಅಭಿನವ್ ಮನೋಹರ್, ಪ್ರವಿಣ್ ದುಬೆ ಸ್ಥಾನ ಉಳಿಸಿಕೊಂಡಿದ್ದಾರೆ.
ಕರ್ನಾಟಕ ಟಿ20 ತಂಡ: ರೋಹನ್ ಪಾಟೀಲ್, ಲವನೀತ್ ಸಿಸೋಡಿಯಾ (ವಿ.ಕೀ), ಮನೀಷ್ ಪಾಂಡೆ, ಕರುಣ್ ನಾಯರ್, ಆರ್. ಸ್ಮರಣ್ (ನಾಯಕ), ಅಭಿನವ್ ಮನೋಹರ್, ಶಿಖರ್ ಶೆಟ್ಟಿ, ಎಲ್. ಮನ್ವಂತ್ ಕುಮಾರ್, ಪ್ರವಿಣ್ ದುಬೆ, ವೈಶಾಖ್ ವಿ, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಕೆಎಲ್ ಶ್ರೀಜಿತ್ (ವಿ.ಕೀ), ಅನೀಶ್ವರ್ ಗೌತಮ್, ರಿತೇಶ್ ಭಟ್ಕಳ್.