ಮಯಾಂಕ್ ದಿಢೀರ್ ಅಸ್ವಸ್ಥ, ಅಪಾಯದಿಂದ ಪಾರು: ಸ್ಪಷ್ಟನೆ ನೀಡಿದ ಇಂಡಿಗೋ ಏರ್‌ಲೈನ್ಸ್

New-Project-2-10
Published on

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ರಣಜಿ ಟ್ರೋಫಿ ಪಂದ್ಯ ಆಡಿದ ಬಳಿಕ ತಂಡದೊಂದಿಗೆ ಅಗರ್ತಲದಿಂದ ಸೂರತ್‌ಗೆ ಪ್ರಯಾಣ ಬೆಳೆಸುವಾಗ ವಿಮಾನದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದು, ತ್ರಿಪುರದಲ್ಲಿ ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಯಾಂಕ್ ಅವರಿಗೆ ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ತ್ರಿಪುರ ವಿರುದ್ಧ ಗೆಲುವು ದಾಖಲಿಸಿದ ಕರ್ನಾಟಕ ತಂಡ, ರೈಲ್ವೇಸ್ ವಿರುದ್ಧದ ತನ್ನ ಮುಂದಿನ ಪಂದ್ಯಕ್ಕಾಗಿ ಮಂಗಳವಾರ ಸೂರತ್‌ಗೆ ಪ್ರಯಾಣಿಸಲು ದೆಹಲಿ ವಿಮಾನ ಏರಿತು. ತಂಡದೊಂದಿಗೆ ವಿಮಾನ ಹತ್ತಿದ ಮಯಾಂಕ್ ಅಗರ್ವಾಲ್ ಸೀಟಿನ ಮುಂಭಾಗದಲ್ಲಿದ್ದ ನೀರು ಕುಡಿದಿದ್ದಾರೆ. ತಕ್ಷಣವೇ ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಮಾನದಲ್ಲಿ ಒಂದೆರಡು ಬಾರಿ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೆ ಮಯಾಂಕ್ ಅವರನ್ನು ವಿಮಾನದಿಂದ ಕೆಳಗೆ ಕರೆತಂದು ಅಗರ್ತಲದ ಐಎಲ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಕೆಲ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಘಟನೆಯ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ. ಮಯಾಂಕ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ನಂತರ ಶೀಘ್ರ ಬೆಂಗಳೂರಿಗೆ ಶ್‌ಟಿ ಮಾಡುವ ಸಾಧ್ಯತೆಗಳಿವೆ.

ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ವಿಮಾನ ಅಗರ್ತಲಕ್ಕೆ ಹಿಂದಿರುಗಿದ್ದನ್ನು ‘ಇಂಡಿಗೋ’ ಖಚಿತಪಡಿಸಿದೆ. ಅಗರ್ತಲದಲ್ಲಿ ಮಯಾಂಕ್‌ರನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ‘ಇಂಡಿಗೋ ್ಲೈಟ್ 6ಇ 5177’ ಸಂಜೆ 4.20ಕ್ಕೆ ಮತ್ತೆ ದೆಹಲಿಗೆ ತೆರಳಿತು ಎನ್ನಲಾಗಿದೆ. ಮಯಾಂಕ್ ಟೀಮ್ ಇಂಡಿಯಾ ಪರ 21 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಏನಿದು ಘಟನೆ?: ಮೂಲಗಳ ಪ್ರಕಾರ, ಕರ್ನಾಟಕದ ತಂಡ ದೆಹಲಿ ಮಾರ್ಗವಾಗಿ ಸೂರತ್‌ಗೆ ಪ್ರಯಾಣಿಸುತ್ತಿದ್ದಾಗ 33 ವರ್ಷದ ಬ್ಯಾಟರ್ ಮಯಾಂಕ್ ಅಗರ್ವಾಲ್ ನೀರು ಕುಡಿದಿದ್ದಾರೆ. ಬಾಯಿಗೆ ನೀರು ಸೋಂಕಿದ ತಕ್ಷಣವೇ ಮಯಾಂಕ್‌ಗೆ ನಾಲಗೆ ಹಾಗೂ ಬಾಯಿ ಸುಟ್ಟ ಅನುಭವವಾಗಿದೆ. ಕೂಡಲೇ ನೀರನ್ನು ಉಗುಳಿದ ಮಯಾಂಕ್ ಮಾತನಾಡಲೂ ಸಾಧ್ಯವಾಗದೇ ಸೀಟ್ ಬಳಿಯೇ ಕುಸಿದು ಬಿದ್ದಿದ್ದು, ಅವರ ಕೆನ್ನೆಯಲ್ಲಿ ಊತ ಕಂಡುಬಂದಿದೆ ಎನ್ನಲಾಗಿದೆ. ವಿಮಾನದಲ್ಲಿ ನೀರಿನ ಬಾಟಲಿ ಇಡುವ ಜಾಗದಲ್ಲಿ ಬೇರೆ ಯಾವುದೋ ಬಾಟಲ್ ಇಡಲಾಗಿದ್ದು ಈ ಘಟನೆಗೆ ಕಾರಣ ಎನ್ನಲಾಗಿದೆ. ನೀರು ಎಂದು ಭಾವಿಸಿದ ಮಯಾಂಕ್ ಅಗರ್ವಾಲ್ ಇದನ್ನು ಕುಡಿದಿದ್ದಾರೆ. ವಿಷಕಾರಿ ಅಂಶ ಮಯಾಂಕ್ ದೇಹದ ಒಳಗೆ ಸೇರಿರುವ ಸಾಧ್ಯತೆ ಕಡಿಮೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net