

ಮುಂಬೈ: ನ್ಯೂಜಿಲೆಂಡ್ ವಿರುದ್ಧ ಜೂನ್ 18ರಿಂದ ಸೌಥಾಂಪ್ಟನ್ನಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಮುನ್ನ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಹೊಸ ಕಿಟ್ನಲ್ಲಿ ಮಿಂಚಲಿದೆ. ಈ ಹೊಸ ಕಿಟ್ನ ಝಲಕ್ ಅನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾ ಸದ್ಯ ಮುಂಬೈನಲ್ಲಿ ಹೋಟೆಲ್ ಕ್ವಾರಂಟೈನ್ನಲ್ಲಿರುವ ನಡುವೆ ಮಯಾಂಕ್ ಅಗರ್ವಾಲ್, ತಿಳಿನೀಲಿ ಮತ್ತು ಕಡುನೀಲಿ ಬಣ್ಣದ ಈ ಹೊಸ ಕಿಟ್ ಜೆಸಿರ್ಯನ್ನು ಪ್ರದಶಿರ್ಸಿದ್ದಾರೆ. ಇದರಲ್ಲಿ ಬಿಸಿಸಿಐ ಲಾಂಛನದ ಜತೆಗೆ ಪ್ರಾಯೋಜಕರಾದ ಬೈಜುಸ್ ಮತ್ತು ಎಂಪಿಎಲ್ ಲಾಂಛನವೂ ಇದೆ. ಸಿದ್ಧತೆಯು ಬಲಿಷ್ಠವಾಗಿ ಸಾಗುತ್ತಿದೆ. ಕಾತರವೂ ಹೆಚ್ಚಾಗುತ್ತಿದೆ ಎಂದು ಮಯಾಂಕ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ಕಿಟ್ ಧರಿಸಿ ನೀಡಿರುವ ಪೋಸ್ನ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿಯಲು ಶುಭಮಾನ್ ಗಿಲ್ಗೆ ಸ್ಪರ್ಧೆಯೊಡ್ಡಲಿದ್ದಾರೆ. ಬಳಿಕ ಭಾರತ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಅದರಲ್ಲೂ ಅವಕಾಶ ಪಡೆಯುವ ನಿರೀಕ್ಷೆಯನ್ನು ಮಯಾಂಕ್ ಹೊಂದಿದ್ದಾರೆ.