2020 ಕ್ರಿಕೆಟ್ ಕ್ಯಾಲೆಂಡರ್​ಗೆ ಕಂಟಕ: ತೂಗುಯ್ಯಾಲೆಯಲ್ಲಿ ಬಹುತೇಕ ಟೂರ್ನಿ

Suddi Samagra
Published on

ಮಹಾಮಾರಿ ಕರೊನಾದಿಂದ ವಿಶ್ವದ ಬಹುತೇಕ ರಾಷ್ಟ್ರಗಳು ತತ್ತರಿಸಿದ್ದು, ಸಂಪೂರ್ಣ ಲಾಕ್​ಡೌನ್ ಸ್ಥಿತಿಯಲ್ಲಿವೆ. ಇದರಿಂದ ಕ್ರೀಡಾ ಜಗತ್ತು ಕೂಡ ಸಹಜವಾಗಿಯೇ ಸ್ತಬ್ಧವಾಗಿದೆ. ಸದ್ಯಕ್ಕೆ ಯಾವುದೇ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುವ ಸಾಧ್ಯತೆಗಳೂ ಕಾಣಿಸುತ್ತಿಲ್ಲ. ಈಗಾಗಲೆ ಈ ವರ್ಷದ ಪ್ರತಿಷ್ಠಿತ ಕ್ರೀಡಾಕೂಟಗಳೆಲ್ಲ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿವೆ. ಕ್ರಿಕೆಟ್​ನಲ್ಲೂ 2020ರ ಕ್ಯಾಲೆಂಡರ್ ಸಂಪೂರ್ಣವಾಗಿ ಅಸ್ತವ್ಯಸ್ತವಾಗುವ ಸೂಚನೆಗಳು ಕಾಣಿಸಿಕೊಂಡಿವೆ. ಈ ವರ್ಷದ ಕ್ರಿಕೆಟ್ ಟೂರ್ನಿ ಟಿ20 ವಿಶ್ವಕಪ್​ಗೆ ಅಕ್ಟೋಬರ್-ನವೆಂಬರ್​ವರೆಗೆ ಸಮಯವಿದ್ದರೂ, ಆ ವೇಳೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತದೆ ಎಂಬ ನಂಬಿಕೆ ಯಾರಲ್ಲೂ ಕಾಣಿಸುತ್ತಿಲ್ಲ. ಹೀಗಾಗಿ ಈ ವರ್ಷದ ಕ್ರಿಕೆಟ್ ಕ್ಯಾಲೆಂಡರ್​ಗೆ ಕರೊನಾದಿಂದ ಎದುರಾಗಬಹುದಾದ ಕಂಟಕಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಐಪಿಎಲ್-13

ಮೂಲವೇಳಾಪಟ್ಟಿಯ ಪ್ರಕಾರ ಮಾರ್ಚ್ 29ರಂದು ಆರಂಭಗೊಳ್ಳಬೇಕಾಗಿದ್ದ ಐಪಿಎಲ್ 13ನೇ ಆವೃತ್ತಿ, ವಿದೇಶಿ ಕ್ರಿಕೆಟಿಗರ ವೀಸಾ ಸಮಸ್ಯೆಯಿಂದಾಗಿ ಏಪ್ರಿಲ್ 15ರವರೆಗೆ ಮುಂದೂಡಲ್ಪಟ್ಟಿತ್ತು. 3 ವಾರಗಳ ಲಾಕ್​ಡೌನ್​ನಿಂದಾಗಿ ಏಪ್ರಿಲ್ ಅಂತ್ಯದವರೆಗೂ ಟೂರ್ನಿ ಆರಂಭಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಇನ್ನು ಸದ್ಯದ ಪರಿಸ್ಥಿತಿಯಲ್ಲಿ ದೇಶ ಯಾವಾಗ ಸಹಜ ಸ್ಥಿತಿಗೆ ಬರಲಿದೆ ಎಂದು ಯಾರಿಗೂ ಗೊತ್ತಿರದ ಕಾರಣ, ಬಿಸಿಸಿಐ ಕೂಡ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಕನಿಷ್ಠ 37 ದಿನಗಳ ಕಾಲಾವಕಾಶ ಸಿಕ್ಕರೂ, 60 ಪಂದ್ಯಗಳ ಸಂಪೂರ್ಣ ಟೂರ್ನಿಯನ್ನು ಸಂಘಟಿಸುವ ಯೋಜನೆ ಬಿಸಿಸಿಐನದ್ದಾಗಿದೆ. ಇದರಿಂದ ಮೇ ಮೊದಲ ವಾರದಲ್ಲಿ ಟೂರ್ನಿ ಆರಂಭಗೊಂಡರೂ, ಜೂನ್ ಮೊದಲ ವಾರದವರೆಗೆ ಟೂರ್ನಿ ವಿಸ್ತರಿಸುವ ಲೆಕ್ಕಾಚಾರವಿದೆ. ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಮೇ 24ರಂದು ಫೈನಲ್ ಪಂದ್ಯ ನಡೆಯಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ಸಮಯದಲ್ಲಿ ಐಪಿಎಲ್ ಆಯೋಜಿಸಲು ಅವಕಾಶ ನೀಡುವುದೇ ಎಂಬ ಬಗ್ಗೆ ಅನುಮಾನವಿದೆ. ಒಲಿಂಪಿಕ್ಸ್​ನಂಥ ಕೂಟವೇ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದರಿಂದ ಈ ವರ್ಷ ಐಪಿಎಲ್ ನಡೆಯುವ ಬಗ್ಗೆಯೇ ಅನುಮಾನ ಹೆಚ್ಚಿದೆ. ಇದರ ಜತೆಜತೆಯಲ್ಲೇ, ಮಹಿಳೆಯರ ಪೂರ್ಣಪ್ರಮಾಣದ ಐಪಿಎಲ್​ಗೆ ಪೂರ್ವಸಿದ್ಧತೆಯಾಗಿ ಆಯೋಜನೆಯಾಗಬೇಕಾಗಿದ್ದ, 4 ಮಹಿಳಾ ತಂಡಗಳ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯೂ ನಡೆಯುವ ನಿರೀಕ್ಷೆ ಇಲ್ಲ.

ಮಹಿಳೆಯರ ಏಕದಿನ ಚಾಂಪಿಯನ್​ಷಿಪ್

2021ರ ಮಹಿಳೆಯರ ಏಕದಿನ ವಿಶ್ವಕಪ್​ಗೆ ಅರ್ಹತೆಯ ಭಾಗವಾಗಿ 2017ರಿಂದ ನಡೆಯುತ್ತಿರುವ ಮಹಿಳೆಯರ ಐಸಿಸಿ ಏಕದಿನ ಚಾಂಪಿಯನ್​ಷಿಪ್ ಈ ವರ್ಷ ಅಂತ್ಯವಾಗಬೇಕಿದೆ. ಆತಿಥೇಯ ನ್ಯೂಜಿಲೆಂಡ್ ಹೊರತಾಗಿ ಅಂಕಪಟ್ಟಿಯ ಅಗ್ರ 4 ತಂಡಗಳು ವಿಶ್ವಕಪ್​ಗೆ ನೇರಅರ್ಹತೆ ಪಡೆಯಬೇಕಿದೆ. ಉಳಿದ 3 ಸ್ಥಾನಗಳನ್ನು, ಜೂನ್​ನಲ್ಲಿ ಶ್ರೀಲಂಕಾದಲ್ಲಿ ನಡೆಯುವ ಅರ್ಹತಾ ಟೂರ್ನಿಯ ಮೂಲಕ ತುಂಬಬೇಕಿದೆ. ಕಿವೀಸ್ ಜತೆಗೆ ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್ ಅರ್ಹತೆ ಈಗಾಗಲೆ ಖಚಿತವೆನಿಸಿದೆ. ಉಳಿದೊಂದು ಸ್ಥಾನಕ್ಕೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಸ್ಪರ್ಧೆಯಲ್ಲಿವೆ. ಐಸಿಸಿ ಏಕದಿನ ಚಾಂಪಿಯನ್​ಷಿಪ್​ನಲ್ಲಿ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಸರಣಿ ಮುಂದೂಡಿಕೆಯಾಗಿದ್ದರೆ, ಭಾರತ-ಪಾಕಿಸ್ತಾನ ಸರಣಿ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ನಡೆದಿಲ್ಲ. ನ್ಯೂಜಿಲೆಂಡ್-ಶ್ರೀಲಂಕಾ ಸರಣಿಯೂ ನಡೆದಿಲ್ಲ. ಹೀಗಾಗಿ ಏಕದಿನ ಚಾಂಪಿಯನ್​ಷಿಪ್ ನಿಗದಿಯಂತೆ ಪೂರ್ಣಗೊಳ್ಳದೆ, ಗೊಂದಲ ಮೂಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್

ವಿಶ್ವದ 9 ಪ್ರಮುಖ ಟೆಸ್ಟ್ ತಂಡಗಳ ನಡುವೆ 2019ರ ಜುಲೈನಲ್ಲಿ ಆರಂಭಗೊಂಡ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ (ಡಬ್ಲು್ಯಟಿಸಿ) ವೇಳಾಪಟ್ಟಿಗೆ ಕರೊನಾ ಹೊಡೆತ ನೀಡುವುದು ಖಚಿತ. ಡಬ್ಲು್ಯಟಿಸಿ ಅಂಕಪಟ್ಟಿಯ ಅಗ್ರ 2 ತಂಡಗಳ ನಡುವೆ ಫೈನಲ್ ಪಂದ್ಯ 2021ರ ಜೂನ್​ನಲ್ಲಿ ಲಾರ್ಡ್ಸ್ನಲ್ಲಿ ನಿಗದಿಯಾಗಿದೆ. ಪ್ರತಿ ಸರಣಿಯಲ್ಲೂ ಕನಿಷ್ಠ 2ರಿಂದ ಗರಿಷ್ಠ 5 ಪಂದ್ಯಗಳನ್ನು ಆಡಿಸಬೇಕಾಗಿದ್ದು, ಪ್ರತಿ ಸರಣಿಯಲ್ಲಿ ಒಟ್ಟು 120 ಅಂಕಗಳು ಪಣಕ್ಕಿರುತ್ತವೆ. ಪ್ರತಿ ತಂಡವೂ ತಲಾ 6 ಸರಣಿ ಆಡಬೇಕಾಗಿದ್ದು, ತವರಿನಲ್ಲಿ 3 ಮತ್ತು ಎದುರಾಳಿ ನೆಲದಲ್ಲಿ 3 ಸರಣಿ ಆಡಬೇಕು. ಕೆಲ ತಂಡಗಳು ಈಗಾಗಲೆ 3-4 ಸರಣಿ ಆಡಿದ್ದರೆ, ಇನ್ನು ಕೆಲ ತಂಡಗಳು 1-2 ಸರಣಿಗಳನ್ನಷ್ಟೇ ಆಡಿವೆ. ಸದ್ಯ ಡಬ್ಲು್ಯಟಿಸಿಯ ವರ್ಷಾಂತ್ಯದವರೆಗಿನ ಸರಣಿಗಳಿಗೆಲ್ಲ ತೊಂದರೆಯಾಗುವ ಭೀತಿ ಹರಡಿದೆ.

ದಿ ಹಂಡ್ರೆಡ್

ಟೆಸ್ಟ್, ಏಕದಿನ, ಟಿ20, ಟಿ10 ಬಳಿಕ ಕ್ರಿಕೆಟ್ ಲೋಕ ’ಹಂಡ್ರೆಡ್’ ಎಂಬ ಹೊಸ ಪ್ರಕಾರವನ್ನು ಜುಲೈ-ಆಗಸ್ಟ್​ನಲ್ಲಿ ಕ್ರಿಕೆಟ್ ಜನಕರ ನಾಡಿನಲ್ಲೇ ಸ್ವಾಗತಿಸಬೇಕಾಗಿದೆ. ತಲಾ 8 ಪುರುಷರ ಮತ್ತು ಮಹಿಳಾ ತಂಡಗಳ ನಡುವೆ ನಡೆಯಬೇಕಾಗಿರುವ ಟೂರ್ನಿ ಇದಾಗಿದ್ದು, ತಲಾ 100 ಎಸೆತಗಳ ಪಂದ್ಯಗಳು ನಡೆಯುತ್ತವೆ. ಈ ಮೂಲಕ ಇನ್ನಷ್ಟು ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಸೆಳೆಯುವ ಪ್ರಯತ್ನ ನಡೆಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಆದರೆ ಸದ್ಯ ಬ್ರಿಟನ್ ರಾಜ, ಪ್ರಧಾನಿಗೂ ಕರೊನಾ ಸೋಂಕು ದೃಢಪಟ್ಟಿರುವ ಸಮಯದಲ್ಲಿ ಇಂಥ ಟೂರ್ನಿ ಸಂಘಟಿಸಲು ಸಾಧ್ಯವೇ ಎಂಬ ಅನುಮಾನ ಮೂಡಿದೆ.

ವಿಶ್ವಕಪ್ ಅರ್ಹತಾ ಟೂರ್ನಿಗಳು

ಅಸೋಸಿಯೇಟ್ ದೇಶಗಳ ನಡುವೆ ಈ ವರ್ಷ, ಭಾರತದಲ್ಲಿ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮತ್ತು 2021ರ ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತಾ ಟೂರ್ನಿಗಳು ನಡೆಯಬೇಕಿದೆ. ಸದ್ಯ ಐಸಿಸಿ, ಜೂನ್ ಅಂತ್ಯದವರೆಗಿನ ಅರ್ಹತಾ ಟೂರ್ನಿಗಳನ್ನು ಮುಂದೂಡಿವೆ. ಹೀಗಾಗಿ ನಂತರದ ಟೂರ್ನಿಗಳ ಮೇಲೂ ಈ ನಡೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಏಷ್ಯಾಕಪ್ ಟಿ20 ಟೂರ್ನಿ

ಟಿ20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ಈ ಬಾರಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ, ಟಿ20 ಮಾದರಿಯಲ್ಲೇ ನಡೆಯಬೇಕಿದೆ. ಪಾಕಿಸ್ತಾನಕ್ಕೆ ಆತಿಥ್ಯ ಲಭಿಸಿದ್ದರೂ, ಅಲ್ಲಿ ಆಡಲು ಭಾರತ ಒಪ್ಪದ ಕಾರಣ ಟೂರ್ನಿ ನಡೆಯುವ ಸ್ಥಳವೇ ಇನ್ನೂ ಅಂತಿಮಗೊಂಡಿಲ್ಲ. ಏಷ್ಯಾದ ಬಲಿಷ್ಠ ತಂಡಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಜತೆಗೆ ಹಾಂಕಾಂಗ್ ತಂಡವೂ ಸೆಪ್ಟೆಂಬರ್​ನಲ್ಲಿ ನಿಗದಿಯಾಗಿರುವ ಟೂರ್ನಿಯಲ್ಲಿ ಕಣಕ್ಕಿಳಿಯಬೇಕಿದೆ.

ಟಿ20 ವಿಶ್ವಕಪ್

ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು, ಪುರುಷರ ಟಿ20 ಟೂರ್ನಿಯನ್ನೂ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಯಶಸ್ವಿಯಾಗಿ ಸಂಘಟಿಸುವ ಸವಾಲನ್ನು ಆಸ್ಟ್ರೇಲಿಯಾ ಸ್ವೀಕರಿಸಿದೆ. 16 ತಂಡಗಳ ಟೂರ್ನಿಯಲ್ಲಿ 6 ತಂಡಗಳು ಆರಂಭಿಕ ಅರ್ಹತಾ ಸುತ್ತಿನಲ್ಲಿ ಅಡಬೇಕಿದ್ದರೆ, ನಂತರ 12 ತಂಡಗಳ ನಡುವೆ ಪ್ರಧಾನ ಸುತ್ತಿನ ಪಂದ್ಯಗಳು ನಡೆಯಲಿವೆ. ಆದರೆ ಸದ್ಯ ಆಸ್ಟ್ರೇಲಿಯಾದಲ್ಲೂ ಕ್ರೀಡಾ ಚಟುವಟಿಕೆ ಸಂಪೂರ್ಣವಾಗಿ ನಿಂತಿದೆ. ತೀರಾ ಇತ್ತೀಚೆಗಿನವರೆಗೂ ಫುಟ್​ಬಾಲ್, ರಗ್ಬಿ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದರೂ, ಈಗ ಅದೂ ಸಂಪೂರ್ಣವಾಗಿ ನಿಂತಿದೆ ಮತ್ತು ಕೆಲ ಕ್ರೀಡಾಪಟುಗಳೂ ಕರೊನಾ ಸೋಂಕಿನಿಂದ ಬಳಲುತ್ತಿರುವ ಸುದ್ದಿ ಬರುತ್ತಿವೆ. ಟೂರ್ನಿಗೆ ಇನ್ನೂ 6 ತಿಂಗಳು ಬಾಕಿ ಇದ್ದರೂ, ಅಲ್ಲಿಯವರೆಗೆ ಟೂರ್ನಿಯ ಬಗ್ಗೆ ಗೊಂದಲ ಮುಂದುವರಿಯುವ ಸಾಧ್ಯತೆ ಇದೆ.

ಏಕದಿನ ಕ್ರಿಕೆಟ್ ಲೀಗ್

ಡಬ್ಲು್ಯಟಿಸಿ ಮಾದರಿಯಲ್ಲೇ ಮುಂದಿನ ಮೇ 1ರಿಂದ 2022ರ ಮಾರ್ಚ್ 31ರವರೆಗೆ ಐಸಿಸಿಯ ಏಕದಿನ ಲೀಗ್ ನಡೆಯಬೇಕಾಗಿದೆ. ಇದು 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತಾ ಹಾದಿಯೂ ಆಗಿರುತ್ತದೆ. 12 ಟೆಸ್ಟ್ ರಾಷ್ಟ್ರಗಳ ಜತೆಗೆ ನೆದರ್ಲೆಂಡ್ ಸೇರಿದಂತೆ ಒಟ್ಟು 13 ತಂಡಗಳು ಇದರಲ್ಲಿ ಆಡಲಿವೆ. 2 ವರ್ಷಗಳ ಅವಧಿಯಲ್ಲಿ ಪ್ರತಿ ತಂಡ ಒಟ್ಟು 8 ಏಕದಿನ ಸರಣಿ ಆಡಬೇಕಾಗಿದ್ದು, ತಂಡಗಳು ತವರು ಮತ್ತು ಎದುರಾಳಿ ನೆಲದಲ್ಲಿ ಪರಸ್ಪರ ಮುಖಾಮುಖಿಯಾಗಬೇಕು. ಏಕದಿನ ಲೀಗ್​ನ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಇನ್ನಷ್ಟೇ ನಿಗದಿಪಡಿಸಬೇಕಾಗಿದ್ದು, ಇತ್ತೀಚೆಗೆ ಟೆಲಿ ಕಾನ್ಪರೆನ್ಸ್ ಮೂಲಕ ನಡೆದ ಐಸಿಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳಾದರೂ, ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net