

ಡರ್ಬನ್: ಮ್ಯಾಟ್ ರೆನ್ಶಾ (190 ರನ್, 397 ಎಸೆತ, 21 ಬೌಂಡರಿ, 1 ಸಿಕ್ಸರ್) ಸಿಡಿಸಿದ ಭರ್ಜರಿ ಶತಕದ ಬಲದಿಂದ ಆಸ್ಟ್ರೆಲಿಯಾ ತಂಡ ಆತಿಥೇಯ ಹಾಗೂ ವಿಶ್ವ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಿಟ್ಟವಾಗಿ ಪುಟಿದೆದ್ದಿದೆ.
ಕಿಂಗ್ಸ್ಮೀಡ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 6 ವಿಕೆಟ್ಗೆ 187 ರನ್ಗಳಿಂದ 2ನೇ ದಿನದಾಟ ಆರಂಭಿಸಿದ ಆಸ್ಟ್ರೆಲಿಯಾ, ಚಹಾ ವಿರಾಮದ ಬಳಿಕ 137.2 ಓವರ್ಗಳಲ್ಲಿ 390 ರನ್ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 124 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್, ರೆನ್ಶಾ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ (43) 7ನೇ ವಿಕೆಟ್ಗೆ 86 ರನ್ ಗಳಿಸಿದ ನೆರವಿನಿಂದ ಚೇತರಿಸಿಕೊಂಡಿತು.
ಬಳಿಕ ನಾಥನ್ ಲ್ಯಾನ್ ಜತೆಗೂಡಿ ರೆನ್ಶಾ 134 ರನ್ ಕಲೆಹಾಕಿದರು. ಇದರಲ್ಲಿ 100 ರನ್ ರೆನ್ಶಾ ಅವರೇ ಸಿಡಿಸಿದರು. ಮಂದ ಬೆಳಕಿನಿಂದ ಶನಿವಾರವೂ ಆಟ ಬೇಗನೆ ಸ್ಥಗಿತಗೊಂಡಾಗ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತ ಎದುರಿಸಿ 1 ವಿಕೆಟ್ಗೆ 27 ರನ್ ಗಳಿಸಿದೆ.