

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಂದು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ಗೆ (ISPL) ಕೋರ್ ಕಮಿಟಿ ಸದಸ್ಯರಾಗಿದ್ದು, ಈ ಹೊಚ್ಚ ಹೊಸ ಟಿ-10 ಕ್ರಿಕೆಟ್ ಲೀಗ್ ಸಚಿನ್ ಅವರ ಸಹಯೋಗದಲ್ಲಿ ನಡೆಯಲು ಸಿದ್ಧಗೊಳ್ಳುತ್ತಿದೆ. ಅಷ್ಟಕ್ಕೂ ಯಾವ ರೀತಿ ಇರಲಿದೆ ಈ ಟೆನ್ನಿಸ್ ಬಾಲ್ ಪಂದ್ಯಾವಳಿ? ಇದು ಐಪಿಎಲ್ ಮ್ಯಾಚ್ಗಳಂತೆ ಸ್ಟೇಡಿಯಂನಲ್ಲಿ ನಡೆಯಲಿದ್ಯಾ? ಎಂಬ ಹಲವು ಪ್ರಶ್ನೆಗಳು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಕೆರಳಿಸಿದೆ.
ಐಎಸ್‌ಪಿಎಲ್‌ನ ಭಾಗವಾಗುತ್ತಿರುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್, “ಈ ಲೀಗ್ ಅನ್ನು ಕ್ರಿಕೆಟ್‌ನ ಸಂಭ್ರಮಾಚರಣೆಯಾಗಿ ರೂಪಿಸಲಾಗಿದ್ದು, ಇದು ನನ್ನ ಕ್ರಿಕೆಟ್ ಪಯಣವನ್ನು ನೆನಪಿಸುತ್ತದೆ ಹಾಗೂ ನನ್ನ ಆರಂಭದ ದಿನಗಳನ್ನು ಮೆಲುಕು ಹಾಕುತ್ತದೆ" ಎಂದರು.
"ಟೆನಿಸ್ ಬಾಲ್‌ಗಳೊಂದಿಗೆ ಆಡಿದ ಪಂದ್ಯಗಳಲ್ಲಿ ನಾನು ನನ್ನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಿದ್ದೇನೆ. ಹಾಗಾಗಿ ಈ ಲೀಗ್ ಖಂಡಿತ ಅನೇಕ ಮಹತ್ವಾಕಾಂಕ್ಷಿ ಕ್ರಿಕೆಟ್ ಉತ್ಸಾಹಿಗಳಿಗೆ ಇದೇ ರೀತಿಯ ಅವಕಾಶವನ್ನು ನೀಡುತ್ತದೆ ಎಂಬುದು ನನಗೆ ಖಾತ್ರಿಯಿದೆ" ಎಂದರು.
"ಈ ಒಂದು ಲೀಗ್ ಅತ್ಯಾಕರ್ಷಕ ಸ್ವರೂಪ ಪಡೆಯಲಿದ್ದು, ಎಲ್ಲಾ ವಯೋಮಾನದವರು ಆಡುವ ಕ್ರಿಕೆಟ್‌ನ ಒಂದು ರೂಪವನ್ನು ಉತ್ತೇಜಿಸುತ್ತದೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ಗೆ ನನ್ನ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ" ಎಂದು ಸಚಿನ್ ತಿಳಿಸಿದ್ದಾರೆ,(ಏಜೆನ್ಸೀಸ್).