ಕ್ವಾರಂಟೈನ್ ಉಲ್ಲಂಘಿಸಿದ ಮೇರಿ ಕೋಮ್: ರಾಷ್ಟ್ರಪತಿ ಭವನದ ಉಪಾಹಾರ ಕೂಟದಲ್ಲಿ ಭಾಗವಹಿಸಿದ ಅನುಭವಿ ಬಾಕ್ಸರ್

meryi kove mar 20
Published on

ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ಹಾಗೂ ರಾಜ್ಯಸಭಾ ಸದಸ್ಯೆ ಎಂ.ಸಿ ಮೇರಿ ಕೋಮ್ 14 ದಿನಗಳ ಸ್ವಯಂ ದಿಗ್ಬಂಧನದ ಶಿಷ್ಟಾಚಾರವನ್ನು ಮುರಿದು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕರೊನಾ ವೈರಸ್​ನಿಂದಾಗಿ ಭಾರತ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯೂ (ಡಬ್ಲ್ಯುಎಚ್​ಓ) ವಿದೇಶದಿಂದ ಆಗಮಿಸುವವರು ಕನಿಷ್ಠ 14 ದಿನಗಳ ಕಾಲ ಸ್ವಯಂ ಕ್ವಾರಂಟೈನ್​ನಲ್ಲಿರಬೇಕೆಂದು ಸೂಚಿಸಿವೆ.

ಇತ್ತೀಚೆಗೆ ಇಟಲಿಯಲ್ಲಿ ತರಬೇತಿ ಶಿಬಿರದಲ್ಲಿ ಮತ್ತು ಜೋರ್ಡಾನ್​ನಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸಿದ್ದ ಮೇರಿ ಕೋಮ್ ಮಾರ್ಚ್ 13ರಂದು ತವರಿಗೆ ವಾಸಪಾಗಿದ್ದರು. ಬಳಿಕ ದೆಹಲಿ ನಿವಾಸದಲ್ಲಿ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿದ್ದರು. ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಸಂಸತ್ ಸದಸ್ಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಮಾರ್ಚ್ 18ರಂದು ಉಪಹಾರ ಕೂಟ ಆಯೋಜಿಸಿದ್ದರು. ಇದರಲ್ಲಿ ಪಾಲ್ಗೊಳ್ಳುವ ಮೂಲಕ ಮೇರಿ ಕೋಮ್ 14 ದಿನಕ್ಕೂ ಮೊದಲೇ ಸ್ವಯಂ ನಿರ್ಬಂಧದಿಂದ ಹೊರಬಂದಿದ್ದರು. ಇದೇ ಕೂಟದಲ್ಲಿ ಬಿಜೆಪಿ ಸದಸ್ಯ ದುಶ್ಯಂತ್ ಸಿಂಗ್ ಕೂಡ ಭಾಗಿಯಾಗಿದ್ದರು. ಇವರು ಕರೊನಾ ವೈರಸ್​ಗೆ ಒಳಗಾಗಿರುವ ಗಾಯಕಿ ಕನಿಕಾ ಕಪೂರ್ ಜತೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರು. ‘ರಾಷ್ಟ್ರಪತಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಪಾಲ್ಗೊಂಡಿದ್ದು ನಿಜ. ಆದರೆ, ದುಶ್ಯಂತ್​ರನ್ನು ಭೇಟಿಯಾಗಿಲ್ಲ. ಇನ್ನು 3-4 ದಿನಗಳ ಬಳಿಕವೇ ಮಣಿಪುರಕ್ಕೆ ಮರಳುತ್ತೇನೆ’ ಎಂದಿದ್ದಾರೆ ಮೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net