

ಮೆಲ್ಬೋರ್ನ್: ಆಸ್ಟ್ರೇಲಿಯಾದ ಹೊಸ ರನ್ವೆುಷಿನ್ ಮಾರ್ನಸ್ ಲಬುಶೇನ್ ಬ್ಯಾಟಿಂಗ್ಅನ್ನು ವಿಶೇಷವಾಗಿ ಪ್ರಶಂಸಿಸಿರುವ ದಿಗ್ಗಜ ಸಚಿನ್ ತೆಂಡುಲ್ಕರ್, ತಮ್ಮ ಆಟವನ್ನು ನೆನಪಿಸುವ ಆಟಗಾರ ಎಂದು ಶ್ಲಾಘಿಸಿದ್ದಾರೆ.
ಕಾಡ್ಗಿಚ್ಚು ಪರಿಹಾರ ನಿಧಿ ಸಂಗ್ರಹ ಪಂದ್ಯದಲ್ಲಿ ರಿಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಲಿರುವ ಸಚಿನ್, ಬ್ಯಾಟಿಂಗ್ ವೇಳೆ ಲಬುಶೇನ್ ತೋರುವ ಕಾಲಿನ ಚಲನೆಯನ್ನು (ಫುಟ್ವರ್ಕ್) ಮೆಚ್ಚಿಕೊಂಡಿದ್ದಾರೆ. ತಮ್ಮ ಗತವೈಭವದ ದಿನಗಳನ್ನು ನೆನಪಿಸುವ ಹಾಲಿ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆ ಎದುರಾದಾಗ ಸಚಿನ್, ಲಬುಶೇನ್ ಹೆಸರು ಹೇಳಿದ್ದಾರೆ.
ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಲಾರ್ಡ್ಸ್ನಲ್ಲಿ ನಡೆದ 2ನೇ ಟೆಸ್ಟ್ ನಲ್ಲಿ ಸ್ಟೀವನ್ ಸ್ಮಿತ್ ಗಾಯಗೊಂಡ ಬಳಿಕ ಕನ್ಕಷನ್ ನಿಯಮದನ್ವಯ ಕಣಕ್ಕಿಳಿದ ಲಬುಶೇನ್ 2ನೇ ಇನಿಂಗ್ಸ್ನಲ್ಲಿ ಆಡಿದ ಆಟವನ್ನು ನೋಡಿ ಮೆಚ್ಚಿದ್ದೆ ಎಂದಿದ್ದಾರೆ. 25 ವರ್ಷದ ಲಬುಶೇನ್ ಕಳೆದ ವರ್ಷ 1,104 ರನ್ ಸಿಡಿಸಿ ಗಮನ ಸೆಳೆದಿದ್ದರು.