

ಮೆಲ್ಬೋರ್ನ್: ಐದು ಬಾರಿಯ ಗ್ರ್ಯಾಂಡ್ ಸ್ಲಾಂ ಚಾಂಪಿಯನ್ ರಷ್ಯಾದ ಮರಿಯಾ ಶರಪೋವಾಗೆ 2020ರ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ಗೆ ವೈಲ್ಡ್ಕಾರ್ಡ್ ಪ್ರವೇಶ ನೀಡಲಾಗಿದೆ. ಉದ್ದೀಪನ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ ಒಳಗಾದ ಬಳಿಕ, 2019ರ ವರ್ಷವಿಡೀ ಗಾಯದಿಂದಲೇ ಅವರು ಹಿನ್ನಡೆ ಕಂಡಿದ್ದರು.
2008ರಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ 32 ವರ್ಷದ ತಾರೆ, ಪ್ರಸ್ತುತ ವಿಶ್ವ ರಾಂಕಿಂಗ್ನಲ್ಲಿ 147ನೇ ಸ್ಥಾನದಲ್ಲಿದ್ದು, ನೇರವಾಗಿ ಅರ್ಹತೆ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಅದಲ್ಲದೆ, ಬ್ರಿಸ್ಬೇನ್ ಇಂಟರ್ನ್ಯಾಷನಲ್ ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದ್ದರು.
ಆದರೆ, ಆಸ್ಟ್ರೇಲಿಯನ್ ಓಪನ್ ಕಣದಲ್ಲಿ ಶರಪೋವಾ ದೊಡ್ಡ ಹೆಸರಾಗಿರುವ ಕಾರಣ, ವೈಲ್ಡ್ ಕಾರ್ಡ್ ನೀಡಲಾಗಿದ್ದು, 2003 ಪದಾರ್ಪಣೆ ವರ್ಷದಿಂದ ಇಲ್ಲಿವರೆಗೆ 16 ಟೂರ್ನಿಗಳಲ್ಲಿ ಅವರು ಸ್ಪರ್ಧೆ ಮಾಡಿದಂತಾಗುತ್ತದೆ. ‘ಆಸ್ಟ್ರೇಲಿಯನ್ ಓಪನ್ನ ಡ್ರಾದಲ್ಲಿ ಸ್ಥಾನ ಪಡೆಯುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇಲ್ಲಿ ನಾನು ಅದ್ಭುತ ಅನುಭವಗಳನ್ನು ಪಡೆದಿದ್ದೇನೆ’ ಎಂದು ಶರಪೋವಾ ಹೇಳಿದ್ದಾರೆ.