ಐಪಿಎಲ್ ವೇಳಾಪಟ್ಟಿಗೆ ಹಲವು ಅಡೆತಡೆ!

IPL 12 Feb 20
Published on

ಮುಂಬೈ: ಮುಂದಿನ ತಿಂಗಳ ಕೊನೆಯಲ್ಲಿ 13ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದು ಈಗಾಗಲೇ ಅಧಿಕೃತವಾಗಿದೆ. 20 ದಿನಗಳ ಹಿಂದೆ ಐಪಿಎಲ್ ಆಡಳಿತ ಮಂಡಳಿ ಎಲ್ಲ ಫ್ರಾಂಚೈಸಿಗಳಿಗೆ ಸಣ್ಣ ಮಟ್ಟದ ವೇಳಾಪಟ್ಟಿಯನ್ನು ನೀಡಿದೆ. ಆದರೆ, ಇದರಲ್ಲಿ ಇರುವುದು ಮೂರು ಪಂದ್ಯಗಳ ವಿವರ ಮಾತ್ರ. ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನೂ ಬಿಡುಗಡೆ ಮಾಡಿಲ್ಲ.

ಐಪಿಎಲ್ ವೇಳಾಪಟ್ಟಿಗೆ ಹಲವು ಕಾರಣಗಳು ಅಡ್ಡಿಯಾಗಿವೆ. ಏಪ್ರಿಲ್ 2 ಹಾಗೂ 3ನೇ ವಾರದಲ್ಲಿ ಕೋಲ್ಕತ ಹಾಗೂ ದೆಹಲಿಯಲ್ಲಿ ಕೆಲ ಅಂತಾರಾಷ್ಟ್ರೀಯ ಸಮ್ಮೇಳನಗಳು ನಡೆಯಲಿವೆ. ಈ ಸಮಯದಲ್ಲಿ ಐಪಿಎಲ್ ಆಟಗಾರರಿಗೆ ಹೋಟೆಲ್​ಗಳಲ್ಲಿ ವಾಸ್ತವ್ಯಕ್ಕೆ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಬಿಸಿಸಿಐ ಯೋಚನೆ ನಡೆಸಿದೆ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡ ಈ ಋತುವಿನಲ್ಲಿ ತನ್ನ ತವರಿನ ಪಂದ್ಯಗಳನ್ನು ಗುವಾಹಟಿಯಲ್ಲಿ ಆಡಲು ನಿರ್ಧರಿಸಿತ್ತು. ಆದರೆ, ತಂಡದ ಈ ನಿರ್ಧಾರವನ್ನು ಪ್ರಶ್ನಿಸಿ ಜೈಪುರದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಸಲ್ಲಿಕೆಯಾಗಿದೆ.

ಸಮ್ಮೇಳನ/ರ‍್ಯಾಲಿ/ಸೆಮಿನಾರ್​ಗಳು ಸಾಮಾನ್ಯವಾಗಿ ಐಪಿಎಲ್ ವೇಳಾಪಟ್ಟಿಗೆ ಅಡ್ಡಿ ಮಾಡುವುದಿಲ್ಲ. ಇದರ ಹಿಂದೆ ಬೇರೆ ಕಾರಣಗಳೂ ಇರಬಹುದು ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಲಿ ಋತುವಿನಲ್ಲಿ ಡಬಲ್ ಹೆಡರ್ ಪಂದ್ಯಗಳನ್ನು ಆದಷ್ಟು ಕಡಿಮೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ವೇಳಾಪಟ್ಟಿ ಸಮಿತಿ ಪ್ರಯತ್ನ ಪಡುತ್ತಿರುವುದು ವೇಳಾಪಟ್ಟಿ ಪ್ರಕಟಣೆ ವಿಳಂಬವಾಗಲು ಕಾರಣವಾಗಿರಬಹುದು. ಅದರೊಂದಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಆಯೋಜಿಸಲು ಉದ್ದೇಶಿಸಿರುವ ಆಲ್​ಸ್ಟಾರ್ಸ್ ಪಂದ್ಯವನ್ನು ಯಾವಾಗ ನಡೆಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆಲ್ ಸ್ಟಾರ್ಸ್ ಪಂದ್ಯಕ್ಕೆ ದಿನಾಂಕ ಹಾಗೂ ಸ್ಥಳ ಇನ್ನೂ ನಿಗದಿಯಾಗಿಲ್ಲ. ಅದರ ನಡುವೆ ಕೆಲ ಫ್ರಾಂಚೈಸಿಗಳು ಆಲ್​ಸ್ಟಾರ್ಸ್ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಸದ್ಯದ ಪ್ರಕಾರ ವೇಳಾಪಟ್ಟಿ ಇನ್ನಷ್ಟು ದಿನ ವಿಳಂಬವಾಗುವ ಸಾಧ್ಯತೆ ಇದೆ. -ಏಜೆನ್ಸೀಸ್

ಈಗಾಗಲೇ ಪ್ರಕಟವಾಗಿರುವ ಪಂದ್ಯಗಳು
  1. ಮಾ. 29: ಮುಂಬೈ ಇಂಡಿಯನ್ಸ್ -ಸಿಎಸ್​ಕೆ, ಮುಂಬೈ
  2. ಮಾ.30: ಡೆಲ್ಲಿ ಕ್ಯಾಪಿಟಲ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್, ದೆಹಲಿ
  3. ಮಾ. 31: ಆರ್​ಸಿಬಿ-ಕೆಕೆಆರ್, ಬೆಂಗಳೂರು
ಏಷ್ಯಾ ಇಲೆವೆನ್ ಪಂದ್ಯಕ್ಕೆ ಆಟಗಾರರು

ಮಾರ್ಚ್ 18 ಹಾಗೂ 21ರಲ್ಲಿ ಬಾಂಗ್ಲಾದೇಶದಲ್ಲಿ ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ತಂಡಗಳ ನಡುವೆ ಟಿ20 ಪಂದ್ಯ ನಿಗದಿಯಾಗಿದೆ. ಏಷ್ಯಾ ಇಲೆವೆನ್ ತಂಡಕ್ಕೆ ಐವರು ಭಾರತೀಯ ಆಟಗಾರರನ್ನು ಕಳುಹಿಸಿಕೊಡುವುದಾಗಿ ಬಿಸಿಸಿಐ ಅಧ್ಯಕ್ಷ ಈಗಾಗಲೇ ಹೇಳಿದ್ದಾರೆ. ಢಾಕಾದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಯಾವ ಆಟಗಾರರನ್ನು ಕಳುಹಿಸಿಕೊಡುತ್ತಾರೆ ಎನ್ನುವುದು ನಿರ್ಧಾರವಾಗಿಲ್ಲ. ಆದರೆ, ಫ್ರಾಂಚೈಸಿಗಳು ಮಾತ್ರ ಇದಕ್ಕೆ ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. 10 ದಿನಗಳ ಮುಂಚಿತವಾಗಿ ಆಟಗಾರರು ತಂಡಕ್ಕೆ ಸಿಗದೇ ಇದ್ದಲ್ಲಿ, ಸಿದ್ಧತೆ ಹಾಗೂ ಪ್ರಮೋಷನಲ್ ಅಭಿಯಾನಗಳಿಗೆ ಹಿನ್ನಡೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net