

ಕಲ್ಯಾಣಿ (ಪ.ಬಂಗಾಳ): ಅನುಭವಿ ಬ್ಯಾಟ್ಸ್ಮನ್ ಮನೋಜ್ ತಿವಾರಿ (303*ರನ್, 414 ಎಸೆತ, 30 ಬೌಂಡರಿ, 5 ಸಿಕ್ಸರ್) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ತ್ರಿಶತಕ ಸಿಡಿಸುವ ಮೂಲಕ ಗಮನಸೆಳೆದರು. ರಣಜಿ ಟ್ರೋಫಿ 6ನೇ ಸುತ್ತಿನ ಎ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಬಂಗಾಳ ತಂಡದ ಮನೋಜ್ ತಿವಾರಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬಂಗಾಳ ತಂಡ 7 ವಿಕೆಟ್ಗೆ 635 ರನ್ ಕಲೆಹಾಕಿತು. ಬಂಗಾಳ ತಂಡದ ಪರ ತ್ರಿಶತಕ ಸಿಡಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಕ್ಕೂ ಮೊದಲು 1998-99 ದೇವಾಂಗ್ ಗಾಂಧಿ 323 ರನ್ ಬಾರಿಸಿದ್ದರು. ಮನೋಜ್ ತಿವಾರಿ ಕಡೇ 50 ರನ್ಗಳು ಕೇವಲ 37 ಎಸೆತಗಳಲ್ಲಿ ದಾಖಲಾಯಿತು. ಮನೋಜ್ ತ್ರಿಶತಕ ಸಿಡಿಸಿದ ಬೆನ್ನಲ್ಲೇ ಇನಿಂಗ್ಸ್ ಡಿಕ್ಲೇರ್ ಘೋಷಿಸಲಾಯಿತು. ರಾಷ್ಟ್ರೀಯ ತಂಡದ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ.
ಮೇಘಾಲಯ, ಛತ್ತೀಸ್ಗಢ, ರಾಜಸ್ಥಾನಕ್ಕೆ ಜಯ: ರಾಜಸ್ಥಾನ, ಛತ್ತೀಸ್ಗಢ ಹಾಗೂ ಮೇಘಾಲಯ ತಂಡಗಳು 2ನೇ ದಿನದಾಟದಲ್ಲೇ ಗೆಲುವಿನ ನಗೆ ಬೀರಿದವು. ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ರಾಜಸ್ಥಾನ ತಂಡ ಇನಿಂಗ್ಸ್ ಹಾಗೂ 96 ರನ್ಗಳಿಂದ ಕೇರಳ ವಿರುದ್ಧ ಗೆಲುವು ದಾಖಲಿಸಿದರೆ, ಎಲೈಟ್ ಸಿ ಗುಂಪಿನಲ್ಲಿ ಛತ್ತೀಸ್ಗಢ, ತ್ರಿಪುರ ವಿರುದ್ಧ ಇನಿಂಗ್ಸ್ ಜಯ ದಾಖಲಿಸಿತು. -ಪಿಟಿಐ/ಏಜೆನ್ಸೀಸ್
ತ.ನಾಡಿಗೆ ಮೊದಲ ಜಯ
ಆರಂಭಿಕ 5 ಸುತ್ತುಗಳಲ್ಲಿ ನಿರಾಸೆ ಅನುಭವಿಸಿದ್ದ ತಮಿಳುನಾಡು ತಂಡ ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಕಡೆಗೂ ಗೆಲುವಿನ ಖಾತೆ ತೆರೆಯಲು ಸಫಲವಾಗಿದೆ. ಚೆನ್ನೈನಲ್ಲಿ ನಡೆದ 6ನೇ ಸುತ್ತಿನ ಪಂದ್ಯದಲ್ಲಿ ಸ್ಟಾರ್ ಆಟಗಾರರೊಳಗೊಂಡ ತಮಿಳುನಾಡು ತಂಡ ಇನಿಂಗ್ಸ್ ಹಾಗೂ 164 ರನ್ಗಳಿಂದ ರೈಲ್ವೇಸ್ ತಂಡವನ್ನು ಮಣಿಸಿತು.
ವಿನಯ್ಗೆ 6 ವಿಕೆಟ್
ಪುದುಚೇರಿ ತಂಡ ಪ್ರತಿನಿಧಿಸುತ್ತಿರುವ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್ ಕುಮಾರ್ (51ಕ್ಕೆ 6) ಟೂರ್ನಿಯಲ್ಲಿ 2ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ವಿನಯ್ಕುಮಾರ್ ಮಾರಕ ದಾಳಿಯಿಂದಾಗಿ ಪುದುಚೇರಿ ತಂಡ ಅರುಣಾಚಲ ಪ್ರದೇಶ ಎದುರು ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಟೂರ್ನಿಯಲ್ಲಿ ವಿನಯ್ ಕುಮಾರ್ ಇದುವರೆಗೆ 32 ವಿಕೆಟ್ ಕಬಳಿಸಿದ್ದಾರೆ.