VIDEO| ಅದ್ಭುತವಾಗಿ ಸಿಕ್ಸರ್​ ತಡೆದು ಗೆಲುವಿನ ರೂವಾರಿಯಾದ ಮನೀಷ್​ ಪಾಂಡೆ; ವಿಡಿಯೋ ವೈರಲ್​

manish web
Published on

ಬೆಂಗಳೂರು: ಕರ್ನಾಟಕ ತಂಡದ ಮಾಜಿ ನಾಯಕ ಹಾಗೂ ಅನುಭವಿ ಬ್ಯಾಟರ್​ ಮನೀಷ್​ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡು ಬೀಗಿತು. ಬಿರುಸಿನ 50 ರನ್​ ಸಿಡಿಸಿ ಹುಬ್ಬಳ್ಳಿ ತಂಡ ಬೃಹತ್​ ಮೊತ್ತ ಪೇರಿಸಲು ನೆರವಾದ ಮನೀಷ್​ ಪಾಂಡೆ ನಂತರ ಅದ್ಭುತ ನಿರ್ವಹಣೆಯ ಮೂಲಕವೂ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಮೈಸೂರು ವಾರಿಯರ್ಸ್​ ವಿರುದ್ಧದ ಫೈನಲ್​ ಪಂದ್ಯದ ನಿರ್ಣಾಯಕ ಕೊನೇ ಓವರ್​ನಲ್ಲಿ ಮನೀಷ್​ ಪಾಂಡೆ ಬೌಂಡರಿ ಗೆರೆ ಬಳಿಕ ಅದ್ಭುತವಾಗಿ ಸಿಕ್ಸರ್​ ತಡೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಹುಬ್ಬಳ್ಳಿ ತಂಡ 8 ವಿಕೆಟ್​ಗೆ 203 ರನ್​ ಪೇರಿಸಿದರೆ, ಪ್ರತಿಯಾಗಿ 19 ಓವರ್​ಗಳಲ್ಲಿ 6 ವಿಕೆಟ್​ಗೆ 192 ರನ್​ ಗಳಿಸಿದ ಮೈಸೂರಿಗೆ ಕೊನೇ ಓವರ್​ನಲ್ಲಿ 12 ರನ್​ ಬೇಕಿತ್ತು. ಆಗ ಯುವ ವೇಗಿ ಮನ್ವಂತ್​ ಕುಮಾರ್​ ಮೊದಲ ಎಸತದಲ್ಲಿ ವಿಕೆಟ್​ ಕಬಳಿಸಿದರೆ, 2ನೇ ಎಸೆತದಲ್ಲಿ 1 ಲೆಗ್​ಬೈ ರನ್​ ಬಿಟ್ಟುಕೊಟ್ಟರು. ಉಳಿದ 4 ಎಸೆತಗಳಲ್ಲಿ 11 ರನ್​ ಬೇಕಿದ್ದಾಗ, ಓವರ್​ನ 3ನೇ ಎಸೆತದಲ್ಲಿ ಎಡಗೈ ಬ್ಯಾಟರ್​ ಜೆ. ಸುಚಿತ್​ ಹೊಡೆದ ಚೆಂಡು ಲಾಂಗ್​&ಆ್​ ಬೌಂಡರಿ ಗೆರೆ ದಾಟಿ ಬಹುತೇಕ ಸಿಕ್ಸರ್​ ಆಗುವುದರತ್ತ ಸಾಗಿತ್ತು. ಆಗ ಮನೀಷ್​ ಪಾಂಡೆ ಗಾಳಿಯಲ್ಲಿ ಹಾರಿ ಅದ್ಭುತವಾಗಿ ಚೆಂಡನ್ನು ತಡೆದು ಬೌಂಡರಿ ಗೆರೆಯ ಒಳಗೆ ಬೀಳಿಸಿದರು. ಬ್ಯಾಟರ್​ಗಳು ಆಗ ಒಂದು ರನ್​ ಮಾತ್ರ ಓಡಿದರು. ಈ ಮೂಲಕ ಮನೀಷ್​ ಪಾಂಡೆ ತಂಡಕ್ಕೆ 5 ರನ್​ ರಸಿಕೊಟ್ಟರು. ಅಲ್ಲದೆ ಜೆ. ಸುಚಿತ್​ಗೆ ಸ್ಟ್ರೈಕ್​ ಕೂಡ ತಪ್ಪಿತು. 4ನೇ ಎಸೆತದಲ್ಲಿ ಒಂದು ಬೈ ರನ್​ ಕಸಿದ ಬಾಲಂಗೋಚಿ ಮೋನಿಷ್​ ರೆಡ್ಡಿ ಮತ್ತೆ ಸುಚಿತ್​ಗೆ ಸ್ಟ್ರೈಕ್​​ ನೀಡಿದರು. ಕೊನೇ 2 ಎಸೆತಗಳಲ್ಲಿ 9 ರನ್​ ಕಸಿಯಬೇಕಾದ ಒತ್ತಡದಲ್ಲಿ, 5ನೇ ಎಸೆತಕ್ಕೆ ಸುಚಿತ್​ ಔಟಾದರೆ, ಕೊನೇ ಎಸೆತದಲ್ಲಿ ಮತ್ತೆ ರನ್​ ಬರಲಿಲ್ಲ. ಈ ಮೂಲಕ ಹುಬ್ಬಳ್ಳಿ ಟೈಗರ್ಸ್​ 8 ರನ್​ಗಳಿಂದ ಗೆದ್ದಿತು. ಮನೀಷ್​ ಪಾಂಡೆ ಸಿಕ್ಸರ್​ ರಸಿದ್ದು ಹುಬ್ಬಳ್ಳಿಗೆ ರನ್​ ಮಾತ್ರ ಉಳಿಸಿದ್ದಲ್ಲ, ಮೈಸೂರಿನ ಮೇಲಿನ ಒತ್ತಡವನ್ನೂ ಹೆಚ್ಚಿಸಿತು. ಹೀಗಾಗಿ ಮನೀಷ್​ ಅದ್ಭುತ ಫೀಲ್ಡಿಂಗೇ ಗೆಲುವಿಗೆ ಕಾರಣ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net