

ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಹೆಸರನ್ನು ಪ್ರತಿಷ್ಠಿತ ಖೇಲ್ರತ್ನ ಪ್ರಶಸ್ತಿಗೆ ಹಾಕಿ ಇಂಡಿಯಾ ಶಿಫಾರಸು ಮಾಡಿದೆ. ಜತೆಗೆ ಆಟಗಾರ್ತಿಯರಾದ ವಂದನಾ ಕಟಾರಿಯಾ, ಮೋನಿಯಾ ಮತ್ತು ಪುರುಷರ ತಂಡದ ಡ್ರಾ್ಯಗ್ಫ್ಲಿಕ್ ತಜ್ಞ ಹರ್ವನ್ಪ್ರೀತ್ ಸಿಂಗ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ನಿಂದ (ಟಿಟಿಎಫ್ಐ) ಅನುಭವಿ ಆಟಗಾರ್ತಿ ಮನಿಕಾ ಬಾತ್ರಾ ಹೆಸರು ಖೇಲ್ರತ್ನ ಪ್ರಶಸ್ತಿಗೆ ಶಿಫಾರಸುಗೊಂಡಿದೆ.
‘ಸರ್ದಾರ್ ಸಿಂಗ್ (2017) ಖೇಲ್ರತ್ನ ಪ್ರಶಸ್ತಿ ಪಡೆದಿರುವ ಕೊನೆಯ ಹಾಕಿ ಆಟಗಾರ. ರಾಣಿ ರಾಂಪಾಲ್ ಮಹಿಳಾ ಹಾಕಿಯಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದು, ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಅರ್ಹರಾಗಿದ್ದಾರೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮೊಹಮದ್ ಮುಸ್ತಾಕ್ ಅಹ್ಮದ್ ತಿಳಿಸಿದ್ದಾರೆ.
ಸತತ 2ನೇ ಬಾರಿ ಮನಿಕಾ ಹೆಸರು ಶಿಫಾರಸು: ಟಿಟಿ ತಾರೆ ಮನಿಕಾ ಬಾತ್ರಾ ಹೆಸರು ಸತತ 2ನೇ ವರ್ಷ ಖೇಲ್ರತ್ನ ಪ್ರಶಸ್ತಿಗೆ ಶಿಫಾರಸುಗೊಂಡಿದೆ. ಈ ವರ್ಷ ಖೇಲ್ರತ್ನ ಪ್ರಶಸ್ತಿ ಸ್ಪರ್ಧೆಯಲ್ಲಿರುವ ಕ್ರೀಡಾಪಟುಗಳ ಸಂಖ್ಯೆ ಈಗ 8ಕ್ಕೇರಿದೆ. ಕ್ರಿಕೆಟಿಗ ರೋಹಿತ್ ಶರ್ಮ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಕುಸ್ತಿಪಟು ವಿನೇಶ್ ಪೋಗಟ್, ಶೂಟರ್ ಅಂಜುಂ ಮೌದ್ಗಿಲ್, ಬಾಕ್ಸರ್ಗಳಾದ ವಿಕಾಸ್
ಕೃಷ್ಣನ್ ಮತ್ತು ಅಮಿತ್ ಪಾಂಗಲ್ ಹೆಸರು ಈಗಾಗಲೆ ಶಿಫಾರಸು ಗೊಂಡಿದೆ. ಟಿಟಿಎಫ್ಐನಿಂದ ಅರ್ಜುನಕ್ಕೆ ಮಧುರಿಕಾ ಪಾಟ್ಕರ್, ಮಾನವ್ ಠಕ್ಕರ್, ಸುತೀರ್ಥ ಮುಖರ್ಜಿ ಶಿಫಾರಸುಗೊಂಡಿದ್ದಾರೆ.
ಅರ್ಜುನಕ್ಕೆ ಸಾತ್ವಿಕ್-ಚಿರಾಗ್ ಶಿಫಾರಸು: ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯಿಂದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಡಬಲ್ಸ್ ಜೋಡಿ ಮತ್ತು ಸಿಂಗಲ್ಸ್ ಆಟಗಾರ ಸಮೀರ್ ವರ್ಮ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದೆ. ದ್ರೋಣಾಚಾರ್ಯಕ್ಕೆ ಎಸ್. ಮುರಳೀಧರನ್, ಭಾಸ್ಕರ್ ಬಾಬು ಹೆಸರು ಸೂಚಿಸಲಾಗಿದೆ.
ಕನ್ನಡಿಗ ಕಾರ್ಯಪ್ಪ ಹೆಸರು ಶಿಫಾರಸು
ಕರ್ನಾಟಕದ ಕೋಚ್ ಬಿಜೆ ಕಾರ್ಯಪ್ಪ ಮತ್ತು ರಮೇಶ್ ಪಥನಿಯಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಹಾಕಿ ಇಂಡಿಯಾ ಶಿಫಾರಸು ಮಾಡಿದೆ. ಜತೆಗೆ ಮಾಜಿ ಆಟಗಾರರಾದ ಆರ್ಪಿ ಸಿಂಗ್ ಮತ್ತು ತುಷಾರ್ ಖಂಡೇಕರ್ ಹೆಸರುಗಳನ್ನು ಜೀವಮಾನ ಸಾಧನೆಗಾಗಿ ಮೇಜರ್ ಧ್ಯಾನ್ಚಂದ್ ಪ್ರಶಸ್ತಿಗಳಿಗೆ ಶಿಫಾರಸುಗೊಳಿಸಲಾಗಿದೆ. ಕಾರ್ಯಪ್ಪ 2019ರಲ್ಲಿ ಸುಲ್ತಾನ್ ಜೊಹರ್ ಕಪ್ ಜಯಿಸಿದ ಭಾರತದ ಜೂನಿಯರ್ ಪುರುಷರ ತಂಡದ ಕೋಚ್ ಆಗಿದ್ದರು.