

ಪ್ಯಾರಿಸ್: ಸ್ಟಾರ್ ಆಟಗಾರ್ತಿ ಮನಿಕಾ ಬಾತ್ರಾ ನೇತೃತ್ವದ ಭಾರತ ಮಹಿಳಾ ತಂಡ ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ತಂಡ ಸ್ಪರ್ಧೆಯಲ್ಲಿ ಕ್ವಾರ್ಟರ್‌ಫೈನಲ್‌ಗೇರಿದೆ. ಮಹಿಳಾ ತಂಡ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದ್ದು, ಸೋಮವಾರ ನಡೆದ ಪಂದ್ಯದಲ್ಲಿ 3-2ರಿಂದ ರೊಮೇನಿಯಾ ಎದುರು ರೋಚಕ ಗೆಲುವು ದಾಖಲಿಸಿದೆ.
ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ 2-0ರಿಂದ ಮುನ್ನಡೆ ಸಾಧಿಸಿದ ಭಾರತಕ್ಕೆ ತಿರುಗೇಟು ನೀಡಿದ ರೊಮೇನಿಯಾ 2-2 ಸಮಬಲ ಸಾಧಿಸಿ ನಿರ್ಣಾಯಕ 5ನೇ ಪಂದ್ಯಕ್ಕೆ ವಿಸ್ತರಿಸಿತು. ನಿರ್ಣಾಯಕ ಪಂದ್ಯದಲ್ಲಿ ಮನಿಕಾ ಬಾತ್ರಾ 11-5,11-7, 11-7 ರಿಂದ ಉನ್ನತ ಶ್ರೇಯಾಂಕಿತೆ ಬರ್ನಾಡೆಟ್ ಸ್ಜೋಕ್ಸೃ್ ಅವರನ್ನು ಮಣಿಸಿದ ಗೆಲುವಿನ ರೂವಾರಿ ಎನಿಸಿದರು. ರೊಮೇನಿಯಾ ಕೂಟದಲ್ಲಿ 4ನೇ ಶ್ರೇಯಾಂಕ ಪಡೆದರೆ, ಭಾರತ 11ನೇ ಶ್ರೇಯಾಂಕ ಪಡೆದಿದೆ.
ಡಬಲ್ಸ್ ಪಂದ್ಯದಲ್ಲಿ ಕನ್ನಡತಿ ಅರ್ಚನಾ ಕಾಮತ್-ಶ್ರೀಜಾ ಅಕುಲಾ ಜೋಡಿ 11-9, 12-10, 11-7 ರಿಂದ ಅದಿನಾ ಡಿಯಾಕೊನೊ-ಎಲಿಜಬೆತ್ ಸಮರಾ ಎದುರು ಗೆದ್ದು ಮುನ್ನಡೆ ಒದಗಿಸಿತು. ನಂತರ ಮೊದಲ ಸಿಂಗಲ್ಸ್‌ನಲ್ಲಿ ಮನಿಕಾ ಬಾತ್ರಾ 11-5, 11-7, 11-7ರಿಂದ ತನಗಿಂತ ಉನ್ನತ ಶ್ರೇಯಾಂಕಿತೆ ಬೆರ್ನಾಡೆಟ್ ಸ್ಜೋಕ್ಸ್‌ಗೆ ಶಾಕ್ ನೀಡಿ ಮುನ್ನಡೆಯನ್ನು 2-0 ಹಿಗ್ಗಿಸಿದರು. ಬಳಿಕ 2ನೇ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಜಾ 11-8, 4-11, 11-7,6-11, 8-11 ರಿಂದ ಯುರೋಪಿಯನ್ ಚಾಂಪಿಯನ್ ಸಮರಾ ಎದುರು ಐದು ಗೇಮ್‌ಗಳ ಹೋರಾಟದಲ್ಲಿ ಪರಾಭವಗೊಂಡರು. ನಂತರ ಅರ್ಚನಾ ಕಾಮತ್ 5-11, 11-8, 7-11, 9-11 ರಿಂದ ಬರ್ನಾಡೆಟ್ ಎದುರು ಸೋಲುವ ಮೂಲಕ ಪಂದ್ಯ ನಿರ್ಣಾಯಕ ಪಂದ್ಯಕ್ಕೆ ಸಾಗಿತು. ಭಾರತ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕ ಅಥವಾ ಜರ್ಮನಿ ವಿರುದ್ಧ ಸೆಣಸಲಿದೆ.