

ನವದೆಹಲಿ: ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಕರೊನಾ ಪಾಸಿಟಿವ್ ಆಗಿದ್ದಾರೆ. ಇದರಿಂದಾಗಿ ಚೆನ್ನೈ ಸೂಪರ್ಕಿಂಗ್ಸ್ ತಂಡದ ಐಪಿಎಲ್ ಸಿದ್ಧತೆಗೆ ದೊಡ್ಡ ಹಿನ್ನೆಡೆಯಾಗಿದೆ. ಈ ನಡುವೆ ದೀಪಕ್ ಚಹರ್ ಶೀಘ್ರದಲ್ಲೇ ಕರೊನಾ ವೈರಸ್ ವಿರುದ್ಧ ಗೆದ್ದು, ಗುಣಮುಖರಾಗಿ ಬರಲಿ ಎಂದು ಅವರ ಅಕ್ಕ ಮಾಲತಿ ಚಹರ್ ಮತ್ತು ಕಿರಿಯ ಸಹೋದರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ರಾಹುಲ್ ಚಹರ್ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ.
ರೂಪದರ್ಶಿಯೂ ಆಗಿರುವ ಮಾಲತಿ ಚಹರ್ ಅವರು, 'ನೀನೊಬ್ಬ ನಿಜವಾದ ವಾರಿಯರ್. ಹೋರಾಡಲೆಂದೇ ಹುಟ್ಟಿರುವೆ. ಈ ಕತ್ತಲೆಯ ರಾತ್ರಿ ಕಳೆದ ಬಳಿಕ ಬೆಳಕಿನ ದಿನಗಳು ಬರಲಿವೆ. ಈ ಹಿಂದಿನಂತೆಯೇ ನೀನು ಬಲಿಷ್ಠವಾಗಿ ಮರಳುವ ವಿಶ್ವಾಸವಿದೆ. ನೀನು ಮತ್ತೊಮ್ಮೆ ಆರ್ಭಟಿಸುವುದನ್ನು ನೋಡಲು ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ ಕಾಯುತ್ತಿರುವೆ' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಲಾಕ್ಡೌನ್ ತೆರವಾದ ಆರಂಭದ ದಿನಗಳಲ್ಲಿ ಮಾಲತಿ ಅವರು ದೀಪಕ್ ಚಹರ್ಗೆ ಅಭ್ಯಾಸದ ವೇಳೆ ಸಾಥ್ ನೀಡಿದ್ದರು ಮತ್ತು ಅವರ ಎಸೆತಗಳ ಎದುರು ಬ್ಯಾಟಿಂಗ್ ಕೂಡ ಮಾಡಿ ಗಮನಸೆಳೆದಿದ್ದರು.
ಐಪಿಎಲ್ ಟೂರ್ನಿಗಾಗಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಯುಎಇಯಲ್ಲೇ ಇರುವ ರಾಹುಲ್ ಚಹರ್, ಕೂಡ ಅಣ್ಣನಿಗೆ ಧೈರ್ಯತುಂಬುವ ಸಂದೇಶವನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. 'ಸಹೋದರ ಬಲಿಷ್ಠವಾಗಿರು. ನಿನ್ನ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿರುವೆ ಮತ್ತು ನನ್ನ ಎಲ್ಲ ಪ್ರಾರ್ಥನೆಗಳು ನಿನ್ನೊಂದಿಗೆ ಇವೆ. ಗೆಟ್ ವೆಲ್ ಸೂನ್' ಎಂದು ರಾಹುಲ್ ಚಹರ್ ಟ್ವೀಟಿಸಿದ್ದಾರೆ.
ಈ ನಡುವೆ ದೀಪಕ್ ಚಹರ್ ಅವರು ಈ ಹಿಂದೆ, ಸಿಎಸ್ಕೆ ತಂಡದ ಆಟಗಾರರ ಜತೆಗೆ ಪೋಸ್ ನೀಡುವಾಗ ಮಾಸ್ಕ್ ಧರಿಸದೆ ಇದ್ದ ಬಗ್ಗೆ ನೀಡಿರುವ ಪ್ರತಿಕ್ರಿಯೆ ಈಗ ವೈರಲ್ ಆಗಿದೆ. ಸಿಎಸ್ಕೆ ತಂಡದ ಚಿತ್ರಕ್ಕೆ ಕಮೆಂಟ್ ಹಾಕಿದ್ದ ರಾಹುಲ್ ಚಹರ್, ಸಹೋದರ ಮಾಸ್ಕ್ ಮತ್ತು ಸಾಮಾಜಿಕ ಅಂತರ ಎಲ್ಲಿ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ದೀಪಕ್ ಚಹರ್, ಸಹೋದರ ನಾವೆಲ್ಲರೂ ಪರೀಕ್ಷೆಯಲ್ಲಿ 2 ಬಾರಿ ನೆಗೆಟಿವ್ ಆಗಿದ್ದೇವೆ. ಕುಟುಂಬದ ಜತೆಗಿದ್ದಾಗ ಮಾಸ್ಕ್ ಧರಿಸುವುದಿಲ್ಲ ಎಂದು ಉತ್ತರಿಸಿದ್ದರು. ದೀಪಕ್ ಚಹರ್ ಕರೊನಾವನ್ನು ಲಘುವಾಗಿ ಪರಿಗಣಿಸಿದ್ದು ಮತ್ತು ಎಚ್ಚರಿಕೆ ತಪ್ಪಿದ್ದೇ ಈಗ ಮುಳುವಾಯಿತೇ ಎಂಬ ಪ್ರಶ್ನೆಗಳು ಎದ್ದಿದೆ.