ಶಾಲಾ ಕಾಲೇಜುಗಳಲ್ಲಿ ಮಾರ್ಷಲ್ ಆರ್ಟ್ಸ್ ಕಡ್ಡಾಯಗೊಳಿಸಿ

shimogga karate association
Published on

ಶಿವಮೊಗ್ಗ: ಮಾರ್ಷಲ್ ಆರ್ಟ್ಸ್ ಕಲಿಕೆಯನ್ನು ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯಗೊಳಿಸಬೇಕು ಎಂದು ನಟ ಸುಮನ್ ತಲ್ವಾರ್ ಹೇಳಿದರು.

ಈಗಾಗಲೇ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳು, ವಸತಿ ಶಾಲೆಗಳಲ್ಲಿ ಕರಾಟೆ ತರಬೇತಿ ನಡೆಯುತ್ತಿದೆ. ಶಿಸ್ತು ಮತ್ತು ಒತ್ತಡ ನಿವಾರಣೆ, ಜೀವನದ ಹಲವು ಕಷ್ಟಗಳಿಂದ ಹೊರಬರಲು ಮಾರ್ಷಲ್ ಆರ್ಟ್ಸ್ ಅಗತ್ಯವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಷಲ್ ಆರ್ಟ್ಸ್ ಅಭ್ಯಾಸದಿಂದ ವ್ಯಾಯಾಮ ಆಗುವ ಜತೆ ರಕ್ಷಣೆಗೆ ನೆರವಾಗುತ್ತದೆ. ಹೆಣ್ಣು ಮಕ್ಕಳು ಶಾಲೆ, ಕಾಲೇಜು, ಕೆಲಸಕ್ಕೆ ಹೋದರೆ ಹಿಂತಿರುಗಿ ಬರುವವರೆಗೆ ಮನೆ ಸದಸ್ಯರು ಆತಂಕದಲ್ಲಿರುತ್ತಾರೆ. ಹೆಣ್ಣು ಮಕ್ಕಳಿಗೆ ಮಾರ್ಷಲ್ ಆರ್ಟ್ಸ್ ಕಲಿಸಿದರೆ ಧೈರ್ಯ ವೃದ್ಧಿಸುತ್ತದೆ ಎಂದರು.

ಕೆಲ ದೇಶಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮಾರ್ಷಲ್ ಆರ್ಟ್ಸ್ ಕಡ್ಡಾಯಗೊಳಿಸಲಾಗಿದೆ. ಕ್ರೀಡೆಗಳಿಗೆ ಆದ್ಯತೆ ನೀಡುವಂತೆ ಮಾರ್ಷಲ್ ಆರ್ಟ್ಸ್ ಕೂಡ ತರಗತಿಯಲ್ಲಿ ಕಲಿಸಬೇಕು. ಉತ್ತರ ಭಾರತದ ಕೆಲ ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಿದೆ ಎಂದು ಹೇಳಿದರು.

ಶಾಲೆ, ಕಾಲೇಜುಗಳ ಬಳಿ ತಂಪು ಪಾನೀಯದಲ್ಲಿ ಡ್ರಗ್ಸ್ ಮಿಶ್ರಣ ಮಾಡುತ್ತಿರುವ ಉದಾಹರಣೆಗಳಿವೆ. ಸಿನಿ ತಾರೆಯರು, ಐಟಿ ಕಂಪನಿಗಳಲ್ಲಿ ಡ್ರಗ್ಸ್ ವ್ಯಸನಿಗಳಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಗಾಂಜಾ ದೊರೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು.

ಆತ್ಮಹತ್ಯೆ ತಡೆ, ಮಾದಕ ವ್ಯಸನದ ವಿರುದ್ಧ ಹೈದರಾಬಾದ್‌ನಲ್ಲಿ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ಭಾರತದಲ್ಲಿ ಡ್ರಗ್ಸ್ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದರು. ಶಿವಮೊಗ್ಗ ವಿನೋದ್, ಅಲ್ತಾಫ್ ಪಾಷಾ, ಸಂಜಯ್ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net