

ಲಂಡನ್: ಮುಂಬರುವ 2026ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಿಂದ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಟೇಬಲ್ ಟೆನಿಸ್ ಸಹಿತ ಪ್ರಮುಖ ಕ್ರೀಡೆಗಳನ್ನು ಕೈಬಿಡಲಾಗಿದ್ದು, ಕೇವಲ 10 ಕ್ರೀಡೆಗಳಲ್ಲಿ ಪದಕ ಸ್ಪರ್ಧೆಗಳು ನಡೆಯಲಿವೆ. ಇದು ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆಗೆ ಬಹುದೊಡ್ಡ ಹೊಡೆತ ನೀಡಲಿದೆ. ಈ ಬೆಳವಣಿಗೆಯ ಬಗ್ಗೆ ಭಾರತೀಯ ಕ್ರೀಡಾ ವಲಯ ಭಾರಿ ನಿರಾಸೆಯನ್ನೂ ವ್ಯಕ್ತಪಡಿಸಿವೆ.
2022ರ ರ್ಬಮಿಂಗ್ಹ್ಯಾಂ ಗೇಮ್ಸ್ನಲ್ಲೇ ಶೂಟಿಂಗ್ ಸ್ಪರ್ಧೆ ಇಲ್ಲದ ಕಾರಣ ಭಾರತದ ಪದಕ ಬೇಟೆಗೆ ಹೊಡೆತ ಬಿದ್ದಿತ್ತು. ಇದೀಗ ಭಾರತ ಪ್ರಬಲವಾಗಿರುವ ಕ್ರೀಡೆಗಳೇ ಹೊರಬಿದ್ದಿರುವುದರಿಂದ 2026ರಲ್ಲಿ ಭಾರತ ಇನ್ನಷ್ಟು ಹಿನ್ನಡೆ ಅನುಭವಿಸಲಿದೆ.
2022ರಲ್ಲಿ 19 ಕ್ರೀಡೆಗಳಲ್ಲಿ ಸ್ಪರ್ಧೆ ನಡೆದಿದ್ದರೆ, ಈ ಬಾರಿ 9 ಕ್ರೀಡೆಗಳನ್ನು ಕೈಬಿಡಲಾಗಿದೆ. ಗ್ಲಾಸ್ಗೋದಲ್ಲಿ 4 ತಾಣಗಳಲ್ಲಿ ಸಂಪೂರ್ಣ ಕ್ರೀಡಾಕೂಟ ಆಯೋಜನೆಗೊಳ್ಳಲಿದೆ. ವೆಚ್ಚ ತಗ್ಗಿಸುವ ಕ್ರಮದ ಜತೆಗೆ ಬಹುಕ್ರೀಡಾ ಸ್ಪರ್ಧೆಗಳ ಕೂಟವಾಗಿ ಮುಂದುವರಿಯುವ ಉದ್ದೇಶದಿಂದ 10 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟ (ಸಿಜಿಎಫ್ ) ತಿಳಿಸಿದೆ.
2026ರ ಜುಲೈ 23ರಿಂದ ಆಗಸ್ಟ್ 2ರವರೆಗೆ 23ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ನಡೆಯಲಿದೆ. ಗ್ಲಾಸ್ಗೋ ಈ ಮುನ್ನ 2014ರ ಗೇಮ್ಸ್ಗೂ ಆತಿಥ್ಯ ವಹಿಸಿತ್ತು. ಆಗ ನಿರ್ಮಿಸಲಾಗಿದ್ದ 4 ತಾಣಗಳಲ್ಲೇ ಈ ಸಲವೂ ಸ್ಪರ್ಧೆ ನಡೆಯಲಿವೆ. ಕ್ರೀಡಾಗ್ರಾಮಕ್ಕೆ ಬದಲಾಗಿ ಕ್ರೀಡಾಪಟುಗಳು ಮತ್ತು ಇತರ ಸಿಬ್ಬಂದಿ, ಅಧಿಕಾರಿಗಳಿಗೆ ಹೋಟೆಲ್ನಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಿಜಿಎಫ್ ತಿಳಿಸಿದೆ.
2014ರ ಆವೃತ್ತಿಯಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ ಆಯೋಜಿಸಿದ್ದ ಎಮಿರೇಟ್ಸ್ ಅರೇನಾದಲ್ಲಿ ಈ ಬಾರಿ ಸೈಕ್ಲಿಂಗ್ ಸ್ಪರ್ಧೆಗಳಷ್ಟೇ ನಡೆಯಲಿವೆ. 2026ರ ಆಗಸ್ಟ್ 15ರಿಂದ 30ರವರೆಗೆ ಬೆಲ್ಜಿಯಂ-ನೆದರ್ಲೆಂಡ್ನಲ್ಲಿ ಹಾಕಿ ವಿಶ್ವಕಪ್ ನಿಗದಿಯಾಗಿದೆ. ಹೀಗಾಗಿ ಎರಡೂ ಸ್ಪರ್ಧೆಗಳ ನಡುವಿನ ಸಂರ್ಷ ತಪ್ಪಿಸುವ ಸಲುವಾಗಿಯೂ ಹಾಕಿ ಸ್ಪರ್ಧೆಯನ್ನು ಕೈಬಿಡಲಾಗಿದೆ.
6 ಕ್ರೀಡೆಗಳ ಪ್ಯಾರಾ ವಿಭಾಗದಲ್ಲೂ ಸ್ಪರ್ಧೆಗಳು ನಡೆಯಲಿರುವುದು ಭಾರತಕ್ಕೆ ಸಮಾಧಾಕರ ಅಂಶವಾಗಿದೆ. ಇತ್ತೀಚೆಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ 7 ಚಿನ್ನ ಸಹಿತ 29 ಪದಕ ಗೆದ್ದಿರುವುದು ಕಾಮನ್ವೆಲ್ತ್ನಲ್ಲೂ ಉತ್ತಮ ಸಾಧನೆಯ ನಿರೀೆ ಮೂಡಿಸಿದೆ.
ಗೇಮ್ಸ್ನಲ್ಲಿ ಉಳಿದುಕೊಂಡಿರುವ ಕ್ರೀಡೆಗಳ ಪೈಕಿ ಅಥ್ಲೆಟಿಕ್ಸ್, ಬಾಕ್ಸಿಂಗ್, ವೇಯ್ಟ್ಲಿಫ್ಟಿಂಗ್, ಜುಡೋ ಮಾತ್ರ ಭಾರತ ಪದಕ ನಿರೀೆ ಇಡಬಹುದಾದ ಪ್ರಮುಖ ಸ್ಪರ್ಧೆಗಳಾಗಿವೆ.
ಹೊರಬಿದ್ದ ಕ್ರೀಡೆಗಳು
ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಟೇಬಲ್ ಟೆನಿಸ್, ಸ್ಕ್ವಾಷ್, ಟ್ರಯಾಥ್ಲಾನ್, ಬೀಚ್ ವಾಲಿಬಾಲ್, ರಗ್ಬಿ ಸೆವೆನ್ಸ್ 2026ರ ಆವೃತ್ತಿಯಿಂದ ಹೊರಬಿದ್ದ ಪ್ರಮುಖ ಕ್ರೀಡೆಗಳು. ಶೂಟಿಂಗ್ ಸ್ಪರ್ಧೆಯನ್ನು 2022ರಲ್ಲೇ ಕೈಬಿಡಲಾಗಿತ್ತು. ಆರ್ಚರಿ 2010ರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿತ್ತು. ಬ್ಯಾಡ್ಮಿಂಟನ್, ಟಿಟಿ, ಸ್ಕಾ$್ವಷ್ ಕೈಬಿಡುವ ಮೂಲಕ ಎಲ್ಲ ರ್ಯಾಕೆಟ್ ಕ್ರೀಡೆಗಳನ್ನು ಕಡೆಗಣಿಸಿದಂತಾಗಿದೆ.
10 ಕ್ರೀಡೆಗಳಲ್ಲಿ ಪದಕ ಸ್ಪರ್ಧೆ
ಅಥ್ಲೆಟಿಕ್ಸ್-ಪ್ಯಾರಾ ಅಥ್ಲೆಟಿಕ್ಸ್, ಈಜು-ಪ್ಯಾರಾ ಈಜು, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್-ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್ಬಾಲ್, ವೇಯ್ಟ್ಲಿಫ್ಟಿಂಗ್-ಪ್ಯಾರಾ ಪವರ್ಲಿಫ್ಟಿಂಗ್, ಬಾಕ್ಸಿಂಗ್, ಜುಡೋ, ಲಾನ್ ಬೌಲ್ಸ್-ಪ್ಯಾರಾ ಬೌಲ್ಸ್, 3/3 ಬಾಸ್ಕೆಟ್ಬಾಲ್-3/3 ವೀಲ್ಚೇರ್ ಬಾಸ್ಕೆಟ್ಬಾಲ್ ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ವೆಚ್ಚ ತಗ್ಗಿಸುವ ಉದ್ದೇಶ
ಈ ಹಿಂದಿನ ಯೋಜನೆಯ ಪ್ರಕಾರ 2026ರ ಗೇಮ್ಸ್ ಆಸ್ಟ್ರೆಲಿಯಾದ ವಿಕ್ಟೋರಿಯಾದಲ್ಲಿ ನಡೆಯಬೇಕಾಗಿತ್ತು. ಆದರೆ ದುಬಾರಿ ವೆಚ್ಚದ ಭೀತಿಯಿಂದ ಆಸೀಸ್ ಕಳೆದ ವರ್ಷ ಆತಿಥ್ಯದಿಂದ ಹಿಂದೆ ಸರಿದಿತ್ತು. ನಂತರ ಬದಲಿ ಆತಿಥ್ಯಕ್ಕೆ ಯಾರೂ ಮುಂದೆ ಬಾರದಿದ್ದಾಗ, ಗ್ಲಾಸ್ಗೋದಲ್ಲಿ ಗೇಮ್ಸ್ ನಡೆಸಲು ವಿಶೇಷ ಮನವಿ ಸಲ್ಲಿಸಲಾಗಿತ್ತು. ಇದರನ್ವಯ ಗ್ಲಾಸ್ಗೋ ಆತಿಥ್ಯ ವಹಿಸಿದರೂ, ವೆಚ್ಚ ತಗ್ಗಿಸುವ ಸಲುವಾಗಿ ಈಗಾಗಲೆ ಇರುವ ಕ್ರೀಡಾಂಗಣಗಳನ್ನು ಮಾತ್ರ ಬಳಸಿಕೊಳ್ಳಲಿದೆ. ಹೀಗಾಗಿ ಕ್ರೀಡಾಸ್ಪರ್ಧೆಗಳ ಸಂಖ್ಯೆಯನ್ನೂ ಸೀಮಿತಗೊಳಿಸಲಾಗಿದೆ.
ಭಾರತಕ್ಕೆ ಭಾರಿ ನಷ್ಟ
2026ರ ಗೇಮ್ಸ್ನಿಂದ ಕೈಬಿಡಲ್ಪಟ್ಟಿರುವ ಹೆಚ್ಚಿನ ಕ್ರೀಡೆಗಳೆಲ್ಲ ಭಾರತದ ನೆಚ್ಚಿನ ಸ್ಪರ್ಧೆಗಳೇ ಆಗಿವೆ. ಹಾಕಿಯಲ್ಲಿ ಭಾರತ ತಂಡ ಪುರುಷರ ವಿಭಾಗದಲ್ಲಿ 3 ಬೆಳ್ಳಿ, 2 ಕಂಚು, ಮಹಿಳೆಯರಲ್ಲಿ 3 ಪದಕ ಗೆದ್ದ ಇತಿಹಾಸ ಹೊಂದಿದೆ. ಬ್ಯಾಡ್ಮಿಂಟನ್ನಲ್ಲಿ ಭಾರತ ಇದುವರೆಗೆ 10 ಚಿನ್ನ, 8 ಬೆಳ್ಳಿ, 13 ಕಂಚಿನ ಸಹಿತ 31 ಪದಕ ಗೆದ್ದು ಪ್ರಾಬಲ್ಯ ಸಾಧಿಸಿದೆ. ಶೂಟಿಂಗ್ನಲ್ಲಿ ಭಾರತ 63 ಸ್ವರ್ಣ, 44 ಬೆಳ್ಳಿ, 28 ಕಂಚಿನ ಸಹಿತ 135 ಪದಕ ಗೆದ್ದ ದಾಖಲೆ ಹೊಂದಿದೆ. ಕುಸ್ತಿಯಲ್ಲೂ 49 ಚಿನ್ನ, 39 ಬೆಳ್ಳಿ, 26 ಕಂಚಿನ ಸಹಿತ 114 ಪದಕ ಗೆದ್ದ ಸಾಧನೆ ಮಾಡಿದೆ. 2022ರಲ್ಲಿ ಕ್ರಿಕೆಟ್ ಸೇರ್ಪಡೆಗೊಂಡ ಬಳಿಕ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಟೇಬಲ್ ಟೆನಿಸ್ನಲ್ಲೂ 2022ರಲ್ಲಿ ಭಾರತ 4 ಚಿನ್ನ ಸಹಿತ 7 ಪದಕ ಗೆದ್ದು ಬೀಗಿತ್ತು.ಸ್ಕಾ$್ವಷ್ನಲ್ಲೂ 2 ಪದಕ ಗೆದ್ದಿತ್ತು. 2022ರ ರ್ಬಮಿಗ್ಹ್ಯಾಂ ಗೇಮ್ಸ್ನಲ್ಲಿ ಭಾರತ 22 ಚಿನ್ನ, 16 ಬೆಳ್ಳಿ, 23 ಕಂಚಿನ ಸಹಿತ 61 ಪದಕ ಗೆದ್ದು ಪದಕಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿತ್ತು.
ಗೇಮ್ಸ್ ಬಹಿಷ್ಕಾರಕ್ಕೆ ಕರೆ
ಕಾಮನ್ವೆಲ್ತ್ ಗೇಮ್ಸ್ನಿಂದ ಪ್ರಮುಖ ಕ್ರೀಡೆಗಳನ್ನು ಕೈಬಿಟ್ಟಿರುವುದು ಭಾರತೀಯ ಕ್ರೀಡಾ ಪ್ರಗತಿಗೆ ಹೊಡೆತ ನೀಡುವಂಥ ಬೆಳವಣಿಗೆಯಾಗಿದೆ. ಹೀಗಾಗಿ ಭಾರತ 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಾಲ್ಗೊಳ್ಳದೇ ಇರುವುದು ಉತ್ತಮ ಎಂದು ಬ್ಯಾಡ್ಮಿಂಟನ್ ಕೋಚ್ಗಳಾದ ಪುಲ್ಲೇಲಾ ಗೋಪಿಚಂದ್ ಮತ್ತು ವಿಮಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. "ಕಾಮನ್ವೆಲ್ತ್ ಗೇಮ್ಸ್ ತನ್ನ ಚಾಮ್ರ್ ಕಳೆದುಕೊಳ್ಳುತ್ತಿದೆ. ಇನ್ನು ಅದನ್ನು ನಡೆಸುವ ಅಗತ್ಯವಿಲ್ಲ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಅಷ್ಟೇ ಸಾಕು. ಕಾಮನ್ವೆಲ್ತ್ ಗೇಮ್ಸ್ ಈಗ ಅಪ್ರಸ್ತುತ. ಅದಕ್ಕಾಗಿ ಹಣ ಖರ್ಚು ಮಾಡುವ ಬದಲಾಗಿ ಭಾರತ, ತನ್ನ ಕ್ರೀಡಾ ಸೌಕರ್ಯ ಅಭಿವೃದ್ಧಿಗಾಗಿ ಆ ಹಣವನ್ನು ವ್ಯಯಿಸುವುದು ಉತ್ತಮ' ಎಂದು ಗೋಪಿಚಂದ್ ಹೇಳಿದ್ದಾರೆ.