

ಮ್ಯಾಡ್ರಿಡ್: ಕರೊನಾ ಭೀತಿಯಿಂದಾಗಿ ಪ್ರತಿಷ್ಠಿತ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿ ರದ್ದುಗೊಂಡಿದ್ದರೂ ಸಂಘಟಕರು ಸುಮ್ಮನಾಗಿಲ್ಲ. ವರ್ಚುವಲ್ ಟೆನಿಸ್ ವಿಡಿಯೋ ಗೇಮಿಂಗ್ ತಂತ್ರಜ್ಞಾನದ ಮೂಲಕ ಆನ್ಲೈನ್ನಲ್ಲಿ ಟೂರ್ನಿಯನ್ನು ಸಂಘಟಿಸಲು ನಿರ್ಧರಿಸಿದ್ದಾರೆ. ವೃತ್ತಿಪರ ಟೆನಿಸ್ ಆಟಗಾರರೇ ಟೂರ್ನಿಯಲ್ಲಿ ಆಡಲಿದ್ದಾರೆ. ಈ ಮೂಲಕ ಟೆನಿಸ್ ಪ್ರೇಮಿಗಳಿಗೆ ಮನರಂಜನೆ ಒದಗಿಸುವುದು ಮಾತ್ರವಲ್ಲದೆ, ಕರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆಯನ್ನೂ ನೀಡಲು ಮುಂದಾಗಿದ್ದಾರೆ.
ಮ್ಯಾಜಿಕ್ ಬಾಕ್ಸ್ ಟೆನಿಸ್ ಸೆಂಟರ್ನ ಕ್ಲೇ-ಕೋರ್ಟ್ನಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ಈಗ ಪುರುಷರ ಮತ್ತು
ಮಹಿಳಾ ಸಿಂಗಲ್ಸ್ ವಿಭಾಗದಿಂದ ತಲಾ 16 ಮಂದಿ ತಮ್ಮ ಮನೆಯಿಂದಲೇ ‘ಟೆನಿಸ್ ವರ್ಲ್ಡ್ ಟೂರ್’ ವಿಡಿಯೋ ಗೇಮ್ ಮೂಲಕ ಆಡಲಿದ್ದಾರೆ. ಇದಕ್ಕಾಗಿ ಆಟಗಾರರು ರ್ಯಾಕೆಟ್ ಬದಲಾಗಿ ಅಂತರ್ಜಾಲವನ್ನು ಬಳಸಬೇಕಾಗಿದೆ. ನೊವಾಕ್ ಜೋಕೊವಿಕ್, ರಾಫೆಲ್ ನಡಾಲ್ ಸಹಿತ ಸ್ಟಾರ್ ಆಟಗಾರರು ಟೂರ್ನಿಯಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ. ಏಪ್ರಿಲ್ 27ರಿಂದ 30ರವರೆಗೆ ಆನ್ಲೈನ್ ಟೆನಿಸ್ ಟೂರ್ನಿ ಆಯೋಜಿಸಲಾಗಿದ್ದು, ಶೀಘ್ರವೇ ಸ್ಪರ್ಧೆಯ ಡ್ರಾ ಬಿಡುಗಡೆ ಮಾಡಲಾಗುವುದು ಎಂದು ಮ್ಯಾಡ್ರಿಡ್ ಓಪನ್ ಸಂಘಟಕರು ತಿಳಿಸಿದ್ದಾರೆ. ಇದೇ ವೇಳೆ ಕೆಲ ಚಾರಿಟಿ ಪಂದ್ಯಗಳೂ ನಡೆಯಲಿವೆ.
ಕರೊನಾದಿಂದ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡ ಬಳಿಕ ವರ್ಚುವಲ್ ಗೇಮಿಂಗ್ ಮೂಲಕ ಕ್ರೀಡಾ ಸ್ಪರ್ಧೆ ನಡೆಯುತ್ತಿ ರುವುದು ಇದೇ ಮೊದಲಲ್ಲ. ಈಗಾಗಲೆ ಎಫ್1ನಲ್ಲಿ ಇಂಥದ್ದೇ ಪ್ರಯತ್ನ ನಡೆದಿದ್ದರೆ, ಕಳೆದ ತಿಂಗಳು ಲಾ ಲಿಗಾ ಆನ್ಲೈನ್ ಮೂಲಕವೇ ಫಿಫಾ ಫುಟ್ಬಾಲ್ ಟೂರ್ನಿ ಆಯೋಜಿಸಿತ್ತು.
ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯನ್ನು ವೃತ್ತಿಪರ ಆಟಗಾರರಿಗಾಗಿಯೇ ಆಯೋಜಿಸುತ್ತಿದ್ದೇವೆ. ಆದರೆ ಅವರು ತಮ್ಮ ಮನೆಯಿಂದಲೇ ಆಡಬಹುದಾಗಿದೆ. ಇದರಿಂದ ಟೆನಿಸ್ ಪ್ರೇಮಿಗಳಿಗೆ ಮನರಂಜನೆ ಒದಗಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಈ ಕಠಿಣ ಸಮಯದಲ್ಲಿ ನಾವೂ ನೆರವು ನೀಡಲು ಬಯಸಿದ್ದೇವೆ. | ಫೆಲಿಸಿಯಾನೊ ಲೋಪೆಜ್ ಟೂರ್ನಿ ನಿರ್ದೇಶಕ
1.23 ಕೋಟಿ ರೂ. ಬಹುಮಾನ
ಸ್ಪರ್ಧೆಯಲ್ಲಿ ಜಯ ದಾಖಲಿಸುವ ಪುರುಷರ ಹಾಗೂ ಮಹಿಳಾ ಸ್ಪರ್ಧಿಗಳು ತಲಾ 1.23 ಕೋಟಿ ರೂ. (1.62 ಲಕ್ಷ ಡಾಲರ್) ಬಹುಮಾನ ಪಡೆಯಲಿದ್ದಾರೆ. ಇದರಿಂದ ಅವರು ಬಯಸಿದ ಮೊತ್ತವನ್ನು ಕರೊನಾ ವಿರುದ್ಧದ ಹೋರಾಟಕ್ಕೂ ನೀಡಬೇಕು. ಜತೆಗೆ ಹೆಚ್ಚುವರಿ 41 ಲಕ್ಷ ರೂ. ಕೋವಿಡ್-19 ಹೋರಾಟಕ್ಕೆ ನೀಡಲಾಗುತ್ತದೆ. ವೆಬ್ಡಿಯಾ, ಗ್ಲೋಬಲ್ ಮಿಡಿಯಾ ಹಾಗೂ ತಾಂತ್ರಿಕ ಸಂಸ್ಥೆ ಈ ಟೂರ್ನಿಗೆ ಕೈಜೋಡಿಸಿವೆ. ಟೆನಿಸ್ ಪ್ರೇಮಿಗಳು ಈ ಟೂರ್ನಿಯ ಪಂದ್ಯಗಳನ್ನು ಸಂಘಟಕರ ಅಧಿಕೃತ ಸಾಮಾಜಿಕ ಜಾಲತಾಣ ಚಾನಲ್ಗಳಲ್ಲಿ ವೀಕ್ಷಿಸಬಹುದಾಗಿದೆ.