

ಲಕ್ನೋ: ಐಪಿಎಲ್ನ 26ನೇ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ಮತ್ತು ಆಡಿದ ಮೊದಲ 5 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-17ರಲ್ಲಿ ಶುಕ್ರವಾರ ಮುಖಾಮುಖಿ ಆಗಲಿವೆ.
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ 26ನೇ ಪಂದ್ಯದಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕೆಎಲ್ ರಾಹುಲ್ ಗೆಲುವಿನ ಲಯ ಕಾಯ್ದುಕೊಳ್ಳಲು ಪ್ರಯತ್ನಿಸಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಬ್ ಪಂತ್ ಪಡೆ ಗೆಲುವಿನೊಂದಿಗೆ ಪ್ಲೇಆಫ್ ಆಸೆ ಜೀವಂತವಿಡಲು ಹೋರಾಡಲಿದೆ.
ಲಖನೌ ವಿರುದ್ಧ ಇದುವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ತಂಡ ಮೊದಲ ಬಾರಿ ಜಯ ಸಾಧಿಸುವ ತವಕದಲ್ಲಿದೆ. ಡೆಲ್ಲಿ ತಂಡಕ್ಕೆ ದುಬಾರಿ ರನ್ ನೀಡುತ್ತಿರುವ ಬೌಲರ್‌ಗಳೇ ಪ್ರಮುಖ ಸಮಸ್ಯೆಯಾಗಿದ್ದರೆ, ಲಖನೌ ತಂಡಕ್ಕೆ ಬೌಲರ್‌ಗಳೇ ಪ್ರಮುಖ ಬಲ ಆಗಿದ್ದಾರೆ. ಎರಡೂ ತಂಡಗಳಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ (ಡೆಲ್ಲಿ) ಮತ್ತು ಜಸ್ಟಿನ್ ಲ್ಯಾಂಗರ್ (ಲಖನೌ) ಕೋಚ್ ಆಗಿದ್ದಾರೆ.
ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆರಂಕ ಪಡೆದಿರುವ ಲಕ್ಕೋ ತಂಡ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಸ್ಥಾನದಲ್ಲಿದೆ.