19ನೇ ಆವೃತ್ತಿಗೂ ಮುನ್ನವೇ ಮೆಂಟರ್​ ಸ್ಥಾನದಿಂದ ಜಹೀರ್​ ಖಾನ್​ಗೆ ಗೇಟ್​ಪಾಸ್​! ಹೊಸಬರಿಗೆ ಜವಾಬ್ದಾರಿ ಕೊಡಲು LSG ನಿರ್ಧಾರ

ವಿಜಯವಾಣಿ (78)
Published on

LSG Mentor: 2026ರ ಐಪಿಎಲ್​ ಆವೃತ್ತಿಯ ಹರಾಜು ಪ್ರಕ್ರಿಯೆ ಇದೇ ಅಕ್ಟೋಬರ್​ ಅಥವಾ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಹೀಗಾಗಿ, 10 ಬಲಿಷ್ಠ ಫ್ರಾಂಚೈಸಿಗಳು ತೆರೆಮರೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದು, ಆಕ್ಷನ್​ನೊಳಗೆ ತಮ್ಮ ತಂಡಕ್ಕೆ ಹೊಸ ರೂಪ ಕೊಡಲು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಹೀಗಿರುವಾಗಲೇ, ಸಂಜೀವ್ ಗೋಯೆಂಕಾ ಮಾಲೀಕತ್ವದ ಲಖನೌ ಸೂಪರ್ ಜೈಂಟ್ಸ್​, ತಮ್ಮ ತಂಡದ ಮೆಂಟರ್​ ಅನ್ನು ಬದಲಿಸಲು ಮುಂದಾಗಿದೆ.

ಐಪಿಎಲ್​ 18ನೇ ಆವೃತ್ತಿಯಲ್ಲಿ ರಿಷಭ್ ಪಂತ್ ನಾಯಕತ್ವದಲ್ಲಿ ತಕ್ಕ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದ ಎಲ್​ಎಸ್​ಜಿ, ಪ್ಲೇಆಫ್​ಗೆ ಲಗ್ಗೆಯಿಡುವಲ್ಲಿ ವಿಫಲವಾಯಿತು. ಇದು ತಂಡಕ್ಕೆ ಭಾರೀ ನಿರಾಸೆ ಉಂಟುಮಾಡಿತು. ಇದೀಗ 19ನೇ ಆವೃತ್ತಿಗೂ ಮುಂಚಿತವಾಗಿಯೇ ಪ್ರಸ್ತುತ ಲಖನೌ ಸೂಪರ್ ಜೈಂಟ್ಸ್ (LSG) ಮೆಂಟರ್​ ಆಗಿರುವ ಜಹೀರ್ ಖಾನ್​ರನ್ನು ತಂಡದಿಂದ ಕೈಬಿಡುವ ಬಗ್ಗೆ ಫ್ರಾಂಚೈಸಿ ನಿರ್ಧರಿಸಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

2023ರಲ್ಲಿ ಎಲ್​ಎಸ್​ಜಿ ಮೆಂಟರ್​ ಸ್ಥಾನಕ್ಕೆ ಗೌತಮ್ ಗಂಭೀರ್​ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಜಹೀರ್​ ಆ ಸ್ಥಾನದ ಜವಾಬ್ದಾರಿ ಹೊತ್ತುಕೊಂಡರು. ಕೇವಲ ಮೆಂಟರ್​ ಆಗಿ ತಂಡದಲ್ಲಿ ಗುರುತಿಸಿಕೊಳ್ಳದ ಜಹೀರ್ ಖಾನ್​, ಬೌಲಿಂಗ್ ಕೋಚ್ ಆಗಿದ್ದ​ ದಕ್ಷಿಣ ಆಫ್ರಿಕಾದ ಮೋರ್ನೆ ಮೋರ್ಕೆಲ್ ನಿರ್ಗಮನ ಬಳಿಕ ಬೌಲಿಂಗ್ ಕೋಚ್ ಕರ್ತವ್ಯಗಳನ್ನು ಸಹ ತಮ್ಮ ಹೆಗಲಿಗೆ ಹಾಕಿಕೊಂಡರು. ಅಂದಿನಿಂದಲೂ ಮೆಂಟರ್ ಹಾಗೂ ಬೌಲಿಂಗ್ ಕೋಚ್​ ಆಗಿದ್ದ ಜಹೀರ್​ರನ್ನು ಕೈಬಿಟ್ಟು, ಇದೀಗ ಹೊಸಬರನ್ನು ಇನ್ನಷ್ಟು ಜವಾಬ್ದಾರಿಗಳನ್ನು ವಹಿಸುವ ಮೂಲಕ ನೇಮಕ ಮಾಡಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net