

ಲಖನೌ: ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಪಂಜಾಬ್ ಕಿಂಗ್ಸ್ ಹಾಗೂ ಹಿಂದಿನ ಪಂದ್ಯದಲ್ಲಿ ಗೆಲುವಿನ ಹಳಿ ಏರಿರುವ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೂರ್ನಿಯ ದುಬಾರಿ ಆಟಗಾರ ರಿಷಭ್ ಪಂತ್ ಹಾಗೂ ಎರಡನೇ ದುಬಾರಿ ಆಟಗಾರ ಶ್ರೇಯಸ್ ಅಯ್ಯರ್ ಪರಸ್ಪರ ಎದುರಾಗಲಿದ್ದಾರೆ.
ಹಾಲಿ ರನ್ನರ್ ಅಪ್ ಸನ್‌ರೈಸರ್ಸ್ ತಂಡದ ಎದುರು ಏಕಪಕ್ಷೀಯವಾಗಿ ಗೆಲುವು ಸಾಧಿಸಿದ್ದ ಲಖನೌ ಹಾಲಿ ಆವೃತ್ತಿಯಲ್ಲಿ ತವರಿನ ಮೊದಲ ಪಂದ್ಯ ಆಡಲಿದೆ. ರಿಷಭ್ ಪಂತ್ ಲಖನೌ ತವರಿನ ಅಂಗಣದಲ್ಲಿ ಗೆಲುವಿನ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಡೆಲ್ಲಿ ತಂಡದ ಮಾಜಿ ಆಟಗಾರ ಶ್ರೇಯಸ್ ಹಾಗೂ ಕೋಚ್ ರಿಕಿ ಪಾಂಟಿಂಗ್ ಜೋಡಿ ಸವಾಲು ಎದುರಿಸಲಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಮೊದಲ ಪಂದ್ಯದಲ್ಲಿ ನಿಸ್ವಾರ್ಥ ಆಟದಿಂದ ಮನಗೆದ್ದಿರುವ ಶ್ರೇಯಸ್ ಭರ್ಜರಿ ಾರ್ಮ್‌ನಲ್ಲಿದ್ದು, ಗೆಲುವಿನ ಲಯ ಕಾಯ್ದುಕೊಳ್ಳುವ ಹಂಬಲದಲ್ಲಿದ್ದಾರೆ. ಡೆಲ್ಲಿ ಪ್ರೀಮಿಯರ್ ಲೀಗ್‌ನ ಪ್ರತಿಭೆ ಪ್ರಿಯಾಂಶ್ ಆರ್ಯ ಪದಾರ್ಪಣೆಯ ಪಂದ್ಯದಲ್ಲಿ ಭರವಸೆ ಮೂಡಿಸಿದ್ದಾರೆ. ಗುಜರಾತ್ ಟೈಟಾನ್ಸ್ ಎದುರು ಸರ್ವಾಂಗೀರ್ಣ ನಿರ್ವಹಣೆ ತೋರಿದ ಪಂಜಾಬ್ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದು, ಬೌಲರ್‌ಗಳಿಗೆ ನೆರವು ನೀಡುವ ಏಕನಾದಲ್ಲೂ ಅದೇ ಲಯ ಮುಂದುರಿಸುವ ನಿರೀಕ್ಷೆಯಲ್ಲಿದೆ.
ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಎದುರು ಸೋಲಿನ ಬಳಿಕ ಭರ್ಜರಿ ಕಂಬ್ಯಾಕ್ ಮಾಡಿರುವ ಲಖನೌಗೆ ರಿಷಭ್ ಪಂತ್ ಾರ್ಮ್ ಹಿನ್ನಡೆ ಎನಿಸಿದೆ. ಎರಡು ಪಂದ್ಯಗಳಲ್ಲಿ ವೈಲ್ಯ ಕಂಡಿರುವ ಪಂತ್ ಬ್ಯಾಟಿಂಗ್‌ನಿಂದಲೇ ಉತ್ತರಿಸಬೇಕಿದೆ. ಉಪನಾಯಕ ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಭರ್ಜರಿ ಾರ್ಮ್‌ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ರವಿ ಬಿಷ್ಣೋಯಿ ಯುಪಿ ಅಂಗಣದ ಲಾಭ ಪಡೆಯುವ ನಿರೀಕ್ಷೆ ಇದೆ. ಕಳೆದ 3 ವರ್ಷ ಲಖನೌ ಪರ ಆಡಿದ್ದ ಮಾರ್ಕಸ್ ಸ್ಟೋಯಿನಿಸ್ ಮತ್ತು ಯಶ್ ಠಾಕೂರ್ ಈ ಬಾರಿ ಪಂಜಾಬ್ ತಂಡದಲ್ಲಿದ್ದಾರೆ. ಹೀಗಾಗಿ ಮಾಜಿ ತಂಡದ ಎದುರು ಇವರ ಆಟ ಕುತೂಹಲ ಕೆರಳಿಸಿದೆ.
ಬೌಲರ್‌ಗಳಿಗೆ ನೆರವು?
ಟೂನಿಯ ಆರಂಭಿಕ ಐದು ಪಂದ್ಯಗಳಲ್ಲಿ ಪೈಕಿ ಮೂರು ಪಂದ್ಯಗಳಲ್ಲಿ 400ಕ್ಕೂ ಅಧಿಕ ರನ್ ಹರಿದು ಬಂದಿವೆ. ಆದರೆ ಲಖನೌ ಪಿಚ್ ಸ್ಪಿನ್ನರ್‌ಗಳ ಜತೆಗೆ ಮಧ್ಯಮ ವೇಗಿ ಹೆಚ್ಚಿನ ನೆರವು ಒದಗಿಸುವ ನಿರೀಕ್ಷೆ ಇದೆ. ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಏಕನಾ ಬೌಲರ್ ಸ್ನೇಹಿ ಎನಿಸಿದರೆ, ಡಬ್ಲುೃಪಿಎಲ್‌ನಲ್ಲಿ ಬ್ಯಾಟರ್‌ಗಳಿಗೆ ನೆರವು ನೀಡಿದೆ. ಲಖನೌ ತಂಡಕ್ಕೆ ದೇಶೀಯ ಬೌಲರ್‌ಗಳು ಪ್ರಮುಖ ಬಲ ಎನಿಸಿದ್ದು, ಪಂಜಾಬ್ ಸಹ ಅರ್ಷದೀಪ್ ಸಿಂಗ್, ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಅವರನ್ನೇ ನೆಚ್ಚಿಕೊಂಡಿದೆ. ಹಿಂದಿನ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಪಂಜಾಬ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ವೈಶಾಕ್ ಅದೇ ಲಯ ಮುಂದುವರಿಸುವ ತವಕದಲ್ಲಿದ್ದಾರೆ. ₹18 ಕೋಟಿ ಪಡೆದಿರುವ ಯಜುವೇಂದ್ರ ಚಾಹಲ್ ಪರಿಣಾಮಕಾರಿ ಎನಿಸಿಲ್ಲ. ಸನ್‌ರೈಸರ್ಸ್ ಬ್ಯಾಟರ್‌ಗಳನ್ನು 200ರೊಳಗೆ ನಿಯಂತ್ರಿಸಿದ ಶಾರ್ದೂಲ್ ಠಾಕೂರ್, ಆವೇಶ್ ಖಾನ್ ಹಾಗೂ ಪ್ರಿನ್ಸ್ ಯಾದವ್ ಲಖನೌ ಬೌಲಿಂಗ್‌ಗೆ ಬಲ ತುಂಬಲಿದ್ದಾರೆ.
14: ಏಕನಾ ಸ್ಟೇಡಿಯಂನಲ್ಲಿ ಇದುವರೆಗೆ ನಡೆದಿರುವ 14 ಐಪಿಎಲ್ ಪಂದ್ಯಗಳಲ್ಲಿ 7ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದ್ದರೆ, 6ರಲ್ಲಿ ಚೇಸಿಂಗ್ ತಂಡ ಜಯಿಸಿದೆ. 1 ಪಂದ್ಯ ರದ್ದಾಗಿತ್ತು.
ಮುಖಾಮುಖಿ: 4
ಲಖನೌ: 3
ಪಂಜಾಬ್: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್. ಜಿಯೋ ಹಾಟ್‌ಸ್ಟಾರ್.