ಹಣ ಮಾಡಲೆಂದೇ ವಿರಾಟ್​ ಒತ್ತಡದ ಪರಿಸ್ಥಿತಿಯಲ್ಲಿ ಆಡುತ್ತಾನೆ; ಶಾಕಿಂಗ್​ ಹೇಳಿಕೆ ಕೊಟ್ಟ ಪಾಕ್​ ಮಾಜಿ ವೇಗಿ

Virat Kohli
Published on

ನವದೆಹಲಿ: ಈಚೆಗೆ ಮುಕ್ತಾಯಗೊಂಡ 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು, ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದ್ದು, 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿದೆ. ಭಾರತ ಕಪ್​ ಗೆದ್ದಿರುವ ವಿಚಾರ ಪಾಕಿಸ್ತಾನದ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಆಟಗಾರರ ಅಥವಾ ತಂಡದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್​ ಅಖ್ತರ್​ ವಿರಾಟ್​ ಕೊಹ್ಲಿ ವಿರುದ್ಧ ಆರೋಪ ಒಂದನ್ನು ಮಾಡಿದ್ದು, ಭಾರತದ ಅಭಿಮಾನಿಗಳು ಕಿಡಿಕಾರಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯ ಪ್ಯಾನೆಲ್​ ಡಿಸ್ಕಷನ್​ನಲ್ಲಿ ಈ ಕುರಿತು ಮಾತನಾಡಿರುವ ಅಖ್ತರ್, ವಿರಾಟ್​ ಕೊಹ್ಲಿ ತನ್ನ ಕ್ರೇಜ್​ಅನ್ನು ಹೆಚ್ಚಿಸಿಕೊಳ್ಳಲು ಒತ್ತಡದ ಸಂದರ್ಭಗಳನ್ನು ಹುಡುಕುತ್ತಿರುತ್ತಾನೆ ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ವಿಡಿಯೋ ಟೀಮ್​ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ವಿರಾಟ್​ ಕೊಹ್ಲಿ ಸೂಪರ್​ ಸ್ಟಾರ್​​. ನಾನು ನೋಡಿದ ಪ್ರಕಾರ ಎರಡು ರೀತಿಯ ಬ್ಯಾಟರ್​ಗಳು ಇರುತ್ತಾರೆ. ಒಬ್ಬರು ತಂಡ​ ಸಂಕಷ್ಟಕ್ಕೆ ಸಿಲುಕಿದಾಗ ಎಸ್ಕೇಪ್​ ಆಗುವವರು, ಮತ್ತೊಬ್ಬರು ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸುವವರು. ಈ ಪೈಕಿ ಕೊಹ್ಲಿ ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸುವವರ ಪೈಕಿ ಗುರುತಿಸಿಕೊಳ್ಳುತ್ತಾರೆ.

ನಾನು ನೋಡಿದಾ ಹಾಗೆ ವಿರಾಟ್​ ಪ್ರತಿಬಾರಿಯೂ ಒತ್ತಡದ ಪರಿಸ್ಥಿತಿಯನ್ನು ಎದುರು ನೋಡುತ್ತಿರುತ್ತಾನೆ. 2022ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ಪಾಕ್​ ವಿರುದ್ಧ ಪಂದ್ಯದಲ್ಲೂ ಕೊಹ್ಲಿ ಆ ಸಂದರ್ಭಕ್ಕಾಗಿ ಕಾಯುತ್ತಿದ್ದ. ಅಂದು ಪಂದ್ಯವನ್ನು ಗೆಲ್ಲಿಸಿದ್ರೆ ನಾನು ಸೂಪರ್​ ಸ್ಟಾರ್​ ಆಗ್ತೀನಿ. ದುಡ್ಡು, ಸಾಮಾಜಿಕ ಜಾಲತಾಣದಲ್ಲಿ ನನ್ನ ಕ್ರೇಜ್​ ಹೆಚ್ಚಾಗುತ್ತೆ ಎಂಬ ಅರಿವು ಕೊಹ್ಲಿಗೆ ಇತ್ತು. ಆದ್ದರಿಂದಲೇ ಅಂದು ಪಂದ್ಯ ಗೆಲ್ಲಿಸಿದ್ರು. ದೇವರು ಕೂಡ ಕೊಹ್ಲಿಗೆ ಆಶೀರ್ವದಿಸಿದ ಎಂದು ಶೋಯೆಬ್​ ಅಖ್ತರ್​ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ಅಭಿಮಾನಿಗಳು ಈ ರೀತಿಯ ಕ್ಷುಲಕ ಹೇಳಿಕೆಗಳನ್ನು ಕೊಡುವ ಬದಲು ಸುಮ್ಮನೇ ನಿಮ್ಮ ಕೆಲಸ ನೋಡಿಕೊಳ್ಳಿ. ಸಂಕಷ್ಟದ ಸಮಯದಲ್ಲಿ ವಿರಾಟ್​ ತಂಡದ ಕೈ ಹಿಡಿದಿದ್ದಾರೆ. ಅವರ ಮೇಲೆ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಕಮೆಂಟ್​ ಮೂಲಕ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net