ಇಂದಿನಿಂದ ತ್ರಿದಿನ ಅಭ್ಯಾಸ ಹಣಾಹಣಿ: ಹ್ಯಾಮಿಲ್ಟನ್​ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಇಲೆವೆನ್ ತಂಡದ ಸವಾಲು

Kohli
Published on

ಹ್ಯಾಮಿಲ್ಟನ್: ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ20 ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿ, ಏಕದಿನ ಸರಣಿಯಲ್ಲಿ ವೈಟ್​ವಾಷ್ ಅವಮಾನಕ್ಕೆ ತುತ್ತಾಗಿರುವ ಭಾರತ ತಂಡ ಈಗ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆ ಆರಂಭಿಸಿದೆ.

ನ್ಯೂಜಿಲೆಂಡ್ ಇಲೆವೆನ್ ತಂಡದ ವಿರುದ್ಧ ತ್ರಿದಿನ ಅಭ್ಯಾಸ ಪಂದ್ಯ ಶುಕ್ರವಾರ ಆರಂಭವಾಗಲಿದ್ದು, ಆರಂಭಿಕ ಜೋಡಿ, ಸ್ಪಿನ್ನರ್​ಗಳ ಆಯ್ಕೆಯ ಬಗ್ಗೆ ಭಾರತ ಗಮನ ನೀಡಲಿದೆ. ಈ ಪಂದ್ಯದಲ್ಲಿ ತೋರಿದ ನಿರ್ವಹಣೆಯೇ ಫೆ. 21 ರಂದು ವೆಲ್ಲಿಂಗ್ಟನ್​ನಲ್ಲಿ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ ತಂಡದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನ್ಯೂಜಿಲೆಂಡ್ ನೆಲದಲ್ಲಿ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾರಲ್ಲಿ ಯಾರು ಹೆಚ್ಚು ಉಪಯೋಗವಾಗಲಿದ್ದಾರೆ ಎನ್ನುವ ಪರೀಕ್ಷೆಯೂ ಪಂದ್ಯದಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ಇಲೆವೆನ್ ತಂಡದಲ್ಲಿ ರಾಷ್ಟ್ರೀಯ ತಂಡ ಹಾಗೂ ಎ ತಂಡದ ಪ್ರಮುಖ ಆಟಗಾರರು ಸ್ಥಾನ ಪಡೆದಿರುವ ಕಾರಣ ಭಾರತಕ್ಕೆ ತೀವ್ರ ಪೈಪೋಟಿಯ ಅಭ್ಯಾಸ ಪಂದ್ಯ ಇದಾಗಿರಲಿದೆ. ಪಂದ್ಯ ಆರಂಭ: ಬೆಳಗ್ಗೆ 3.30.

ಜಾಲಿ ಮೂಡ್​ನಲ್ಲಿ ಟೀಮ್ ಇಂಡಿಯಾ

ತ್ರಿದಿನ ಅಭ್ಯಾಸ ಪಂದ್ಯ ಹಾಗೂ ಪ್ರಮುಖ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರು ಗುರುವಾರ ವಿಹಾರ ನಡೆಸಿದರು. ಪುತಾರುರುನ ಬ್ಲ್ಯೂ ಸ್ಪ್ರಿಂಗ್ಸ್​ಗೆ ಟೀಮ್ ಇಂಡಿಯಾ ಆಟಗಾರರು ತೆರಳಿದ ಚಿತ್ರವನ್ನು ಬಿಸಿಸಿಐ ತನ್ನ ಟ್ವಿಟರ್ ಪುಟದಲ್ಲಿ ಪ್ರಕಟಿಸಿದೆ. ನಾಯಕ ಕೊಹ್ಲಿ ಜತೆಗೆ ಪತ್ನಿ ಅನುಷ್ಕಾ ಶರ್ಮ ಕೂಡ ಸುತ್ತಾಟಕ್ಕೆ ತೆರಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net