

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಜತೆ ಮೈದಾನದಲ್ಲೇ ಕಿತ್ತಾಡಿಕೊಂಡ ಮಾಜಿ ವೇಗಿ ಎಸ್. ಶ್ರೀಶಾಂತ್ಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ) ಕಮಿಷನರ್ ಲೀಗಲ್ ನೋಟಿಸ್ ನೀಡಿದ್ದಾರೆ.
ಶ್ರೀಶಾಂತ್ ಅವರು ಒಪ್ಪಂದದ ಉಲ್ಲಂಘನೆ ಮಾಡಿದ್ದಾರೆಂದು ಆರೋಪ ಮಾಡಿರುವ ಎಲ್ಎಲ್ಸಿ ಕಮಿಷನರ್, ಗೌತಮ್ ಗಂಭೀರ್ ಅವರನ್ನು ಟಾರ್ಗೆಟ್ ಮಾಡಿರುವ ವಿಡಿಯೋವನ್ನು ಕೂಡಲೇ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?
ಎಲ್ಎಲ್ಸಿ ಟೂರ್ನಿಯ ಎಲಿಮಿನೇಟರ್ ಪಂದ್ಯ ಬುಧವಾರ ರಾತ್ರಿ ಸೂರತ್ನಲ್ಲಿ ನಡೆಯಿತು. ಗಂಭೀರ್ ನೇತೃತ್ವದ ಇಂಡಿಯನ್ಸ್ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದ ಗಂಭೀರ್ ಉತ್ತಮ ಆಟವಾಡಿದರು. ಪಂದ್ಯದ ಎರಡನೇ ಓವರ್ ಅನ್ನು ಶ್ರೀಶಾಂತ್ ಎಸೆದರು. ಎರಡು ಮತ್ತು ಮೂರನೇ ಎಸೆತದಲ್ಲಿ ಕ್ರಮವಾಗಿ ಸಿಕ್ಸರ್ ಮತ್ತು ಬೌಂಡರಿಯನ್ನು ಗಂಭೀರ್ ಬಾರಿಸಿದರು. ಆದರೆ, ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಈ ವೇಳೆ ಶ್ರೀಶಾಂತ್ ಅವರು ಗಂಭೀರ್ಗೆ ಏನೋ ಹೇಳಿದ್ದಾರೆ ಅಥವಾ ಗುರಾಯಿಸಿರುವಂತೆ ಕಾಣುತ್ತದೆ. ಇದರಿಂದ ಆಕ್ರೋಶಗೊಂಡ ಗಂಭೀರ್, ಏನು ಗುರಾಯಿಸ್ತಿದ್ದೀಯಾ ಎನ್ನುವಂತೆ ಶ್ರೀಶಾಂತ್ ಕಡೆ ದಿಟ್ಟಿಸಿ ನೋಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯು ಸಹ ನಡೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಯಿತು.
ಘಟನೆಯ ಬಳಿಕ ಶ್ರೀಶಾಂತ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು, ವಿವಾದದ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಂತಾಯಿತು. ವಿಡಿಯೋದಲ್ಲಿ ಶ್ರೀಶಾಂತ್, ಗಂಭೀರ್ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ನನ್ನನ್ನು ಮಾತು ಮಾತಿಗೂ ಫಿಕ್ಸರ್ ಎಂದು ಕರೆಯುತ್ತಿದ್ದರು. ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದರು ಎಂದು ಆರೋಪ ಮಾಡಿದರು. ಗಂಭೀರ್ ಸ್ವಭಾವವೇ ಹೀಗೆ. ಹಿರಿಯರಿಗೂ ಆತ ಗೌರವ ಕೊಡುವುದಿಲ್ಲ. ಕಾಲು ಕೆರೆದು ಜಗಳ ಮಾಡುವ ವ್ಯಕ್ತಿ ಎಂದೆಲ್ಲ ಶ್ರೀಶಾಂತ್ ವಾಗ್ದಾಳಿ ನಡೆಸಿದ್ದಾರೆ.
ಘಟನೆಯ ಗಂಭೀರತೆಯನ್ನು ಅರಿತ ಎಲ್ಎಲ್ಸಿ, ಈ ವಿಚಾರವಾಗಿ ತನಿಖೆ ನಡೆಸಲಾಗುವುದು ಎಂದು ಡಿ. 7ರಂದು ಅಧಿಕೃತ ಹೇಳಿಕೆಯನ್ನು ನೀಡಿದೆ. ಆಟಗಾರರ ಒಪ್ಪಂದದ ಬಾಧ್ಯತೆಗಳ ಪ್ರಕಾರ ಮತ್ತು ಲೀಗ್‌ನ ನೀತಿ ಸಂಹಿತೆ ನೀತಿಯ ಪ್ರಕಾರ ತನಿಖಾ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ ಎಂದು ಎಲ್ಎಲ್ಸಿ ಸಿಇಒ ಮತ್ತು ಸಹ ಮಾಲೀಕ ರಾಮನ್ ರಜೇಜಾ ಹೇಳಿದ್ದಾರೆ.
ಡಿಸೆಂಬರ್ 6ರಂದು ಶ್ರೀಶಾಂತ್ಗೆ ಲೀಗಲ್ ನೋಟಿಸ್ ನೀಡಲಾಗಿದೆ. ಅಲ್ಲದೆ, ಗಂಭೀರ್ ಟಾರ್ಗೆಟ್ ಮಾಡಿ ಅಪ್ಲೋಡ್ ಮಾಡಿರುವ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಲಾಗಿದೆ. ಮೈದಾನದಲ್ಲಿ ಗಂಭೀರ್ ಅವರು ಶ್ರೀಶಾಂತ್ ಕುರಿತು ಫಿಕ್ಸರ್ ಎಂದು ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಅಂಪೈರ್‌ಗಳು ನೀಡಿದ ವರದಿಯಲ್ಲಿದೆ. (ಏಜೆನ್ಸೀಸ್)