ಅರ್ಜೆಂಟೀನಾ-ಕೊಲಂಬಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಅಭಿಮಾನಿಗಳ ದಾಂಧಲೆ: ಲಿಯೋನೆಲ್ ಮೆಸ್ಸಿ ಕಣ್ಣೀರು!

New-Project-2-6
Published on

ಮಿಯಾಮಿ ಗಾರ್ಡನ್ಸ್: ಅರ್ಜೆಂಟೀನಾ ತಂಡ ಸತತ ಎರಡನೇ ಬಾರಿಗೆ ದಕ್ಷಿಣ ಅಮೆರಿಕದ ಪ್ರತಿಷ್ಠಿತ ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದೆ. ಇದರೊಂದಿಗೆ ದಾಖಲೆಯ 16ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಬಳಗಕ್ಕೆ ಇದು ಸತತ 3ನೇ ಮೇಜರ್ ಪ್ರಶಸ್ತಿ ಗೆಲುವಾಗಿದೆ.

ಮೆಸ್ಸಿ ಕಣ್ಣೀರು: ಎರಡು ದಶಕಗಳ ಕಾಲ ಫುಟ್‌ಬಾಲ್‌ನಲ್ಲಿ ತನ್ನದೇ ಛಾಪು ಹೊಂದಿರುವ 37 ವರ್ಷದ ಮೆಸ್ಸಿ, ಕಳೆದ 3 ವರ್ಷದಲ್ಲಿ ಮೂರು ಪ್ರಮುಖ ಟ್ರೋಫಿಗಳನ್ನು ತನ್ನ ಸಾರಥ್ಯದಲ್ಲಿ ಅರ್ಜೆಂಟೀನಾಗೆ ತಂದುಕೊಟ್ಟಿದ್ದಾರೆ. ಇದರ ನಡುವೆ ಕೊಲಂಬಿಯಾ ಎದುರು ದ್ವಿತೀಯಾರ್ಧದಲ್ಲಿ ಗಾಯದ ಸಮಸ್ಯೆಯಿಂದ ಬೆಂಚ್‌ನಲ್ಲಿ ಕುಳಿತು ಭಾವುಕರಾಗಿ ಕಣ್ಣೀರು ಸುರಿಸಿದರು. 36ನೇ ನಿಮಿಷದಲ್ಲಿ ಬಲಗಾಲಿನ ಪಾದ ನೋವಿಗೆ ತುತ್ತಾದರೂ ತುರ್ತು ಚಿಕಿತ್ಸೆಯ ಬಳಿಕ ಆಟ ಮುಂದುವರಿಸಿದ ಮೆಸ್ಸಿ, 65ನೇ ನಿಮಿಷದಲ್ಲಿ ಬಲಗಾಲಿನ ಪಾದದ ಊತದ ತೀವ್ರ ನೋವಿನಿಂದ ಮೈದಾನದಲ್ಲಿ ಕುಸಿದು ಬಿದ್ದರು. ಟೂರ್ನಿಯ ಆರಂಭದಿಂದಲೂ ಗಾಯದ ಸಮಸ್ಯೆ ಎದುರಿಸಿದ ಮೆಸ್ಸಿ, ಲೀಗ್ ಹಂತದ ಅಂತಿಮ ಪಂದ್ಯ ತಪ್ಪಿಸಿಕೊಂಡಿದ್ದರು. ಟೂರ್ನಿಯಲ್ಲಿ ಮೆಸ್ಸಿ ಏಕೈಕ ಗೋಲು ದಾಖಲಿಸಿದರು.

ಅಭಿಮಾನಿಗಳ ದಾಂಧಲೆ: ಹಾರ್ಡ್ ರಾಕ್ ಕ್ರೀಡಾಂಗಣದಲ್ಲಿ ಫೈನಲ್‌ಗೂ ಮುನ್ನ ಭದ್ರತಾ ಗೇಟ್ ಬಳಿ ಉಂಟಾದ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ಪಂದ್ಯವನ್ನು 1 ಗಂಟೆ 22 ನಿಮಿಷ ತಡವಾಗಿ ಆರಂಭಿಸಲಾಯಿತು. ನೆಚ್ಚಿನ ತಂಡಗಳನ್ನು ಬೆಂಬಲಿಸಲು ಟಿಕೆಟ್ ಖರೀದಿಸಿದ ಪ್ರೇಕ್ಷಕರ ಜತೆಗೆ ಟಿಕೆಟ್ ಹೊಂದಿಲ್ಲದವರು ಮೈದಾನಕ್ಕೆ ನುಗ್ಗಲು ಪ್ರಯತ್ನಿಸಿದ್ದು ದಾಂಧಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಜತೆಗೆ ಆರಂಭದಲ್ಲಿ ಗೇಟ್‌ಗಳನ್ನು ಸ್ವಲ್ಪಮಟ್ಟಿಗೆ ತೆರೆದು ಬೆರಳೆಣಿಕೆಯಷ್ಟು ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಿದ್ದರಿಂದ, ಇತರ ಪ್ರೇಕ್ಷಕರು ಕೋಪಗೊಂಡು ದಾಂಧಲೆ ನಡೆಸಿದರು ಎನ್ನಲಾಗಿದೆ. ೈನಲ್ ಪಂದ್ಯಕ್ಕೆ 65 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net