

ದುಬೈ: ಕರ್ನಾಟಕದ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ 13ನೇ ಐಪಿಎಲ್‌ನ ಉಳಿದ ಅವಧಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯಲ್ಲಿದ್ದಾರೆ. ಅನುಭವಿ ಅಮಿತ್ ಮಿಶ್ರಾ ಗಾಯದ ಸಮಸ್ಯೆಯಿಂದ ಲೀಗ್‌ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಡೆಲ್ಲಿ ತಂಡ ಪ್ರವೀಣ್ ದುಬೆ ಅವರನ್ನು ಬದಲಿ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿದೆ. 27 ವರ್ಷದ ಪ್ರವೀಣ್ ದುಬೆ, ಕರ್ನಾಟಕ ತಂಡದ ಪರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಇದುವರೆಗೂ ಆಡಿರುವ 14 ಪಂದ್ಯಗಳಿಂದ 16 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದರೂ ಹನ್ನೊಂದರ ಬಳಗದಲ್ಲಿ ಆಡಿರಲಿಲ್ಲ. ಜತೆಗೆ ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಗಮನಾರ್ಹ ನಿರ್ವಹಣೆ ತೋರಿದ್ದರು.
ಇದರಿಂದ ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರರ ಸಂಖ್ಯೆ 13ಕ್ಕೇರಿದಂತಾಗಿದೆ. ಪಂಜಾಬ್ ಪರ 5, ರಾಜಸ್ಥಾನ ಪರ 3, ಆರ್‌ಸಿಬಿ ಪರ 2, ಕೆಕೆಆರ್, ಸನ್‌ರೈಸರ್ಸ್ ಪರ ತಲಾ ಒಬ್ಬ ಕರ್ನಾಟಕದ ಆಟಗಾರರು ಆಡುತ್ತಿದ್ದಾರೆ.