

ಕೊಲಂಬೊ: ನಾಯಕ ರೋಹಿತ್ ಶರ್ಮ (64 ರನ್, 44 ಎಸೆತ, 5 ಬೌಂಡರಿ, 4 ಸಿಕ್ಸರ್) ಬಿರುಸಿನ ಆಟದ ಹೊರತಾಗಿಯೂ ಮಣಿಕಟ್ಟಿನ ಸ್ಪಿನ್ನರ್ ಜೆಫ್ರಿ ವಾಂಡರ್ಸೆ (33ಕ್ಕೆ 6) ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು 32 ರನ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ 3 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಕಂಡಿದ್ದು, ಇನ್ನು ಸಮಬಲ ಸಾಧಿಸುವ ಅವಕಾಶ ಮಾತ್ರ ಉಳಿದಿದೆ. ಭಾರತ ತಂಡದ ಕೋಚ್ ಆಗಿ ಗೌತಮ್ ಗಂಭೀರ್‌ಗೆ ಇದು ಮೊದಲ ಸೋಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಲಂಕಾ 3 ವರ್ಷಗಳ ಬಳಿಕ ಭಾರತವನ್ನು ಮಣಿಸುವಲ್ಲಿ ಯಶಸ್ವಿಯಾಯಿತು.
ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (30ಕ್ಕೆ 2) ಬಿಗಿ ದಾಳಿಯ ನಡುವೆಯೂ ಸಂಘಟಿತ ಬ್ಯಾಟಿಂಗ್ ಬಲದಿಂದ 9 ವಿಕೆಟ್‌ಗೆ 240 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (35) ಒದಗಿಸಿದ ಉತ್ತಮ ಆರಂಭದ ನಡುವೆ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡ ಭಾರತ,147 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಚೇಸಿಂಗ್‌ನಲ್ಲಿ ಪರದಾಡಿತು. ಆಲ್ರೌಂಡರ್ ಅಕ್ಷರ್ ಪಟೇಲ್ (44 ರನ್, 44 ಎಸೆತ, 4 ಬೌಂಡರಿ, 2 ಸಿಕ್ಸರ್) ಪ್ರತಿರೋಧದ ಹೊರತಾಗಿಯೂ ಅಂತಿಮವಾಗಿ 42.2 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು.
4. ರೋಹಿತ್ ಶರ್ಮ(10, 831) ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಮಾಜಿ ಕೋಚ್ ರಾಹುಲ್ ದ್ರಾವಿಡ್ (10,768) ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದರು. ತೆಂಡುಲ್ಕರ್ (18,426), ಕೊಹ್ಲಿ (13,886), ಗಂಗೂಲಿ (11,221) ಮೊದಲ ಮೂವರು.
1. ರೋಹಿತ್ ಶರ್ಮ (121) ಆರಂಭಿಕನಾಗಿ ಟೀಮ್ ಇಂಡಿಯಾ ಪರ ಅತಿ ಹೆಚ್ಚು 50 ಪ್ಲಸ್ ರನ್‌ಗಳಿಸಿದ ಬ್ಯಾಟರ್ ಎನಿಸಿದರು. ಸಚಿನ್ ತೆಂಡುಲ್ಕರ್ (120) ನಂತರದಲ್ಲಿದ್ದಾರೆ.