ತವರಿನಲ್ಲಿ ಪೇಸ್​ಗೆ ರನ್ನರ್​ಅಪ್ ವಿದಾಯ: ಬೆಂಗಳೂರು ಓಪನ್, ಭಾರತದ ಕೊನೇ ಟೂರ್ನಿಯ ಫೈನಲ್​ನಲ್ಲಿ ಎಡವಿದ ದಿಗ್ಗಜ ಆಟಗಾರ

Pace
Published on

ಬೆಂಗಳೂರು: ಭಾರತ ಕಂಡ ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮೂರು ದಶಕಗಳ ಕ್ರೀಡಾಜೀವನದಲ್ಲಿ ತವರಿನ ಕೊನೇ ಟೂರ್ನಿಯ ಪ್ರಶಸ್ತಿ ಸನಿಹದಲ್ಲಿ ನಿರಾಸೆ ಎದುರಿಸಿದರು. ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್​ನಲ್ಲಿ ಭಾರತೀಯ ಜೋಡಿ ರಾಮ್ುಮಾರ್ ರಾಮನಾಥನ್ ಹಾಗೂ ಪೂರವ್ ರಾಜಾ ಜೋಡಿಯ ಶ್ರೇಷ್ಠ ನಿರ್ವಹಣೆ ಎದುರು ಮಂಕಾದ ಲಿಯಾಂಡರ್ ಪೇಸ್ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಕೇವಲ 56 ನಿಮಿಷದಲ್ಲಿ ಸೋಲು ಕಂಡಿತು.

ಕೆಎಸ್​ಎಲ್​ಟಿಎ ಪ್ರಧಾನ ಕೋರ್ಟ್​ನಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಶ್ರೇಯಾಂಕರಹಿತ ಲಿಯಾಂಡರ್ ಪೇಸ್ ಹಾಗೂ ಮ್ಯಾಥ್ಯೂ ಎಬ್ಡೆನ್ ಜೋಡಿ 0-6, 3-6 ನೇರಸೆಟ್​ಗಳಿಂದ 4ನೇ ಶ್ರೇಯಾಂಕದ ರಾಮ್ುಮಾರ್ ರಾಮನಾಥನ್ ಹಾಗೂ ಪೂರವ್ ರಾಜಾ ಜೋಡಿಗೆ ಶರಣಾಯಿತು. ತವರಿನಲ್ಲಿ ಆಡುತ್ತಿರುವ ಕೊನೆಯ ಟೂರ್ನಿಯಲ್ಲಿ ಕೆಟ್ಟ ನಿರ್ವಹಣೆ ತೋರಬಾರದು ಎನ್ನುವ ಆಸೆ ಇತ್ತು. ಅದರಂತೆ ಕನಿಷ್ಠ ಪಕ್ಷ ರನ್ನರ್​ಅಪ್ ಟ್ರೋಫಿ ಹಿಡಿದುಕೊಂಡು ನಿರ್ಗಮಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ 46 ವರ್ಷದ ಪೇಸ್ ಹೇಳಿದರು. ಹಾಲಿ ವರ್ಷಾಂತ್ಯದಲ್ಲಿ ವೃತ್ತಿಪರ ಟೆನಿಸ್​ನಿಂದ ನಿವೃತ್ತಿಯಾಗುವುದಾಗಿ ಪೇಸ್ ಈಗಾಗಲೆ ಘೋಷಿಸಿದ್ದಾರೆ.

ಕೇವಲ 22 ನಿಮಿಷ ಸಾಗಿದ ಮೊದಲ ಸೆಟ್​ನಲ್ಲಿ ಪೇಸ್-ಎಬ್ಡೆನ್ ಜೋಡಿ ಒಂದೇ ಒಂದು ಗೇಮ್ ಗೆಲ್ಲಲು ಸಾಧ್ಯವಾಗಲಿಲ್ಲ. ಪೇಸ್ ಹಾಗೂ ಎಬ್ಡೆನ್ ಇಬ್ಬರೂ ಸರ್ವ್ ಉಳಿಸಿಕೊಳ್ಳಲು ಕಷ್ಟಪಟ್ಟರು. ಪೇಸ್​ಗಿಂತ ಹೆಚ್ಚಾಗಿ ಎಬ್ಡೆನ್ ಅತಿಯಾದ ಡಬಲ್​ಫಾಲ್ಟ್​ಗಳನ್ನು ಎಸಗಿ ಎದುರಾಳಿಗೆ ಸುಲಭ ಅಂಕ ನೀಡುತ್ತಿದ್ದರು. ಇನ್ನೊಂದೆಡೆ ರಾಮ್ುಮಾರ್-ಪೂರವ್ ರಾಜಾರ ಸರ್ವ್​ಗಳನ್ನು ರಿಟರ್ನ್ ಮಾಡುವಲ್ಲಿಯೂ ಪೇಸ್-ಎಬ್ಡೆನ್ ಪರದಾಡಿದ್ದ ರಿಂದ ಮೊದಲ ಸೆಟ್​ನಲ್ಲಿ 0-6 ಸೋಲು ಎದುರಿಸಿದರು. 2ನೇ ಸೆಟ್​ನ ಮೊದಲ ಗೇಮ್ಲ್ಲಿಯೇ ಪೇಸ್ ಸರ್ವ್ ಬ್ರೇಕ್​ಗೆ ಒಳಗಾಗಿದ್ದರಿಂದ ಸೋಲು ಖಚಿತಗೊಂಡಿತ್ತು. 4ನೇ ಗೇಮ್ಲ್ಲಿ ಸರ್ವ್ ಬ್ರೇಕ್ ಮಾಡುವ ಅವಕಾಶ ಪೇಸ್ ಜೋಡಿಗೆ ಸಿಕ್ಕಿತಾದರೂ ಕೊನೇ ಅಂಕದಲ್ಲಿ ಪೇಸ್ ಚೆಂಡನ್ನು ನೆಟ್​ಗೆ ಬಡಿದಿದ್ದರಿಂದ ಪಂದ್ಯದಲ್ಲಿ ಕಮ್್ಯಾಕ್ ಮಾಡುವ ಅವಕಾಶ ತಪ್ಪಿಹೋಯಿತು. ಪಂದ್ಯದಲ್ಲಿ ಪೇಸ್ ಜೋಡಿ ಒಟ್ಟು 6 ಡಬಲ್​ಫಾಲ್ಟ್ ಎಸಗಿ ಹಿನ್ನಡೆ ಕಂಡಿತು. ಇದರಲ್ಲಿ ಐದು ಫಾಲ್ಟ್​ಗಳನ್ನು ಎಬ್ಡೆನ್ ಒಬ್ಬರೇ ಮಾಡಿದ್ದರು.

ಫೈನಲ್​ಗೇರಿದ ಡಕ್​ವರ್ತ್, ಬೊಂಜಿ

ಫ್ರಾನ್ಸ್​ನ ಶ್ರೇಯಾಂಕರಹಿತ ಆಟಗಾರ ಬೆಂಜಮಿನ್ ಬೊಂಜಿ ಹಾಗೂ 4ನೇ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರ ಜೇಮ್್ಸ ಡಕ್​ವರ್ತ್ ಸಿಂಗಲ್ಸ್ ವಿಭಾಗದ ಫೈನಲ್​ನಲ್ಲಿ ಎದುರಾಗಲಿದ್ದಾರೆ. ಪ್ರಧಾನ ಕೋರ್ಟ್​ನಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಡಕ್​ವರ್ತ್ 6-3, 6-2 ರಿಂದ ದೈತ್ಯಸಂಹಾರಿ ಇಟಲಿ ಆಟಗಾರ ಜೂಲಿಯನ್ ಒಕ್ಲೆಪ್ಪೊರನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಬೆಂಜಮಿನ್ ಬೊಂಜಿ 6-3, 6-4 ರಿಂದ 2ನೇ ಶ್ರೇಯಾಂಕದ ಆಟಗಾರ ಸ್ಟೆಫಾನೋ ಟ್ರವಾಗ್ಲಿಯಾರನ್ನು ಸೋಲಿಸಿದರು.

ಇಂದು ನನ್ನ ಅನುಭವವನ್ನು ಬಳಸಿಕೊಂಡು ಆಡಲು ಸಾಧ್ಯವಾಗಲಿಲ್ಲ. ರಾಮ್ುಮಾರ್-ಪೂರವ್ ರಾಜಾರ ಸರ್ವ್ ಅತ್ಯುತ್ತಮವಾಗಿತ್ತು. ಸೋಲು-ಗೆಲುವುಗಳನ್ನು ಒಂದೇ ರೀತಿಯಲ್ಲಿ ಕಂಡಿದ್ದೇನೆ. | ಲಿಯಾಂಡರ್ ಪೇಸ್

ದುಬೈನಲ್ಲಿ ಮುಂದಿನ ಟೂರ್ನಿ

ದುಬೈನಲ್ಲಿ ನಾನು ಮುಂದಿನ ಟೂರ್ನಿ ಆಡಲಿದ್ದೇನೆ. ಅಲ್ಲಿಯೂ ಎಬ್ಡೆನ್ ನನ್ನ ಜತೆಗಾರ. ಈಗಾಗಲೇ ಕೆಲವು ಬಾರಿ ದುಬೈ ಟೂರ್ನಿ ಜಯಿಸಿದ್ದೇನೆ. ಎಬ್ಡೆನ್ ಜತೆಯಾಗಿ ಅಲ್ಲಿ ಮೊದಲ ಬಾರಿಗೆ ಆಡಲಿದ್ದೇನೆ ಎಂದು ಪೇಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಣ್ಣೀರು

ಪಂದ್ಯ ಮುಗಿದ ಬಳಿಕ ಪುಟ್ಟಹುಡುಗಿ ಯೊಬ್ಬಳು ನನ್ನ ಬಳಿ ಆಟೋಗ್ರಾಫ್ ಕೇಳಿ ಬಂದಿದಳು. ಆಕೆಯ ಕೆನ್ನೆಯ ಮೇಲೆ ತ್ರಿವರ್ಣ ಧ್ವಜದ ಬಣ್ಣ ಹಾಕಿಕೊಂಡಿದ್ದಳು. ಆಕೆಗಿಂತ ಎರಡು ಪಟ್ಟು ದೊಡ್ಡದಾದ ನನ್ನ ಒನ್ ಲಾಸ್ಟ್ ರೋರ್ ಟಿಶರ್ಟ್ ನೀಡುತ್ತಾ, ‘ಲಿಯಾಂಡರ್ ಪ್ಲೀಸ್ ಸೈನ್’ ಎಂದು ಕೇಳಿದಳು. ಆಕೆಗೆ ಹೆಚ್ಚೆಂದರೆ 4 ವರ್ಷ ಇರಬಹುದು. ನನ್ನ ಹೆಸರನ್ನೂ ಕೂಡ ಆಕೆ ತಿಳಿದುಕೊಂಡಿದ್ದಾಳೆ. ಮುಂದಿನ ಪೀಳಿಗೆಯ ಕೆಲವರಿಗಾದರೂ ಸ್ಪೂರ್ತಿ ತುಂಬಿದ್ದೇನೆ ಎನ್ನುವ ಖುಷಿಯಲ್ಲಿ ತೆರಳು ತ್ತಿದ್ದೇನೆ ಎಂದು ಭಾವುಕರಾಗಿ ಹೇಳಿದರು. ಫಾಮರ್್​ನ ಉತ್ತುಂಗದಲ್ಲಿ ಇರುವಾಗಲೇ ನಿವೃತ್ತಿ ಹೇಳಬೇಕು. ಅದರಂತೆ ಟ್ರೋಫಿ ಕೈಯಲ್ಲಿ ಹಿಡಿದುಕೊಂಡು ಹೊರನಡೆಯುತ್ತಿದ್ದೇನೆ ಎಂದರು.

| ಸಂತೋಷ್ ನಾಯ್ಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net